ರಾಯಚೂರು: ನಗರದ ಚಂದ್ರಬಂಡಾ ರಸ್ತೆಯಲ್ಲಿನ ಹಳೆಯ ಆಶ್ರಯ ಕಾಲೋನಿಯ ಗುಡ್ಡದ ಮೇಲೆ ಅಕ್ರಮ ಮನೆ ನಿರ್ಮಾಣ ಮಾಡುವ ಮೂಲಕ ನೈಸರ್ಗಿಕ ಸಂಪತ್ತು ಲೂಟಿ ಮಾಡುವ ಹುನ್ನಾರ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಆಶ್ರಯ ಕಾಲೋನಿಯ ಗುಡ್ಡವನ್ನು ಜೆಸಿಬಿ ಮೂಲಕ ಒಡೆದು ಮನೆ ನಿರ್ಮಾಣ ಮಾಡುತಿದ್ದು, ಇವರಿಗೆ ನಗರಸಭೆ ಹಾಗೂ ಅಲ್ಲಿನ ಸ್ಥಳೀಯ ಸದಸ್ಯರು ಬೆಂಬಲವಾಗಿ ನಿಂತು ಅವರಿಂದ 40-50 ಸಾವಿರ ಹಣ ಪಡೆಯುತಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ. ಆರಂಭದಲ್ಲಿ ಇಲ್ಲಿ ಒಂದಿಬ್ಬರು ಮನೆ ನಿರ್ಮಾಣ ಮಾಡಿ ಜೀವನ ನಡೆಸುತಿದ್ದರು. ಆದ್ರೆ ಈಗ ಗುಡ್ಡದ ಬಳಿ ಸಾಲು ಸಾಲು ಟೀನ್ ಶೆಡ್ಗಳು ನಿರ್ಮಾಣವಾಗುತ್ತಿದ್ದು, ಇವರಿಗೆ ರಾಜಕೀಯ ನಾಯಕರು, ನಗರಸಭೆಯ ಬೆಂಬಲವಿದೆ. ಅವರು ಬಡ ಜನರಿಂದ ಹಣ ಪಡೆದು ಮನೆ ನಿರ್ಮಾಣಕ್ಕೆ ಪ್ರೋತ್ಸಾಹಿಸುತಿದ್ದು, ಆ ಮೂಲಕ ಸರಕಾರದ ಆಸ್ತಿ ಕಬಳಿಸುವುದರ ಜೊತೆಗೆ ಅಮಾಯಕ ಜನರನ್ನು ದಿಕ್ಕು ತಪ್ಪಿಸುತಿದ್ದಾರೆಂದು ಇಲ್ಲಿನ ಸ್ಥಳೀಯರು ದೂರುತ್ತಿದ್ದಾರೆ.
ಅಕ್ರಮ ಕಲ್ಲು ಗಣಿಗಾರಿಕೆ: ಚಂದ್ರಬಂಡಾ ರಸ್ತೆಯಲ್ಲಿನ ಆಶ್ರಯ ಕಾಲೋನಿಯ ವ್ಯಾಪ್ತಿಯ ಗುಡ್ಡಗಳನ್ನು ಕಡಿದು ಅಕ್ರಮ ಕಲ್ಲು ಗಣಿಗಾರಿಕೆ ಮಾಡುತ್ತಿದ್ದಾರೆ. ರಾಜಕೀಯ ಪ್ರಭಾವಿಗಳು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಗುಡ್ಡಗಾಡು ಪ್ರದೇಶದ ಸಂಪತ್ತನ್ನು ಲೂಟಿ ಮಾಡಲು ಮುಂದಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.