ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುಡಿಜಾವುರ ಬಳಿಯ ನಾರಾಯಣಪುರ ಅಣೆಕಟ್ಟೆ ಹಿನ್ನೀರಿನಲ್ಲಿ ಈಜಲು ಹೋದ ಬಾಲಕ ಮೊಸಳೆ ಬಾಯಿಗೆ ತುತ್ತಾದ ಘಟನೆ ಜರುಗಿದೆ.
ಭಾನುವಾರ ಬೆಳಗಿನ ಜಾವ ಸ್ನೇಹಿತರ ಜೊತೆ ಈಜಲು ಹೋಗಿದ್ದ ಮಂಜುನಾಥ ಶಂಕರಪ್ಪ ಹಳೆಗೌಡ್ರ (15) ಮೃತಪಟ್ಟಿದ್ದು, ಬಾಲಕನ ಮೃತದೇಹ ಪತ್ತೆಗೆ ಸ್ಥಳೀಯ ಈಜುಗಾರರು, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ನಿರಂತರ ಪ್ರಯತ್ನ ಮುಂದುವರೆಸಿವೆ. ಹಿನ್ನೀರಿನಲ್ಲಿ ಅನತಿ ದೂರದಲ್ಲಿ ಈಜಾಡುತ್ತಿದ್ದ ಬಾಲಕ ಏಕಾಏಕಿ ಚೀರಾಡಿದ್ದು, ಸ್ವಲ್ಪ ಹೊತ್ತಲ್ಲೇ ನೀರಿನಲ್ಲಿ ಮುಳುಗಿದವ ಮೇಲಕ್ಕೆ ಬಂದಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಪಿಎಸ್ಐ ಪ್ರಕಾಶ ರೆಡ್ಡಿ ಡಂಬಳ ಘಟನಾ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದರು. ಇನ್ನು ಈ ಘಟನೆ ಲಿಂಗಸುಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.