ರಾಯಚೂರು: ಸುರಕ್ಷತೆ ದೃಷ್ಟಿಯಿಂದ ಹೆಲ್ಮೆಟ್ ಧರಿಸುವುದು ಕಡ್ಡಾಯ. ಆದರೆ, ಜಿಲ್ಲೆಯಲ್ಲಿ ಹೆಲ್ಮೆಟ್ ಧರಿಸುವ ಬೈಕ್ ಸವಾರರ ಸಂಖ್ಯೆ ವಿರಳವಾಗಿದೆ. ಸಂಚಾರಿ ಪೊಲೀಸರು ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸುತ್ತಿದ್ದರು ಮತ್ತು ದಂಡ ವಿಧಿಸುತ್ತಿದ್ದರೂ ಸವಾರರು ಇನ್ನೂ ಎಚ್ಚೆತ್ತುಕೊಂಡಿಲ್ಲ! ಹೆಲ್ಮೆಟ್ ಧರಿಸದ ಪರಿಣಾಮ ಅಪಘಾತದಲ್ಲಿ ಎಷ್ಟೋ ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ.
ಐಎಂವಿ ಕಾಯ್ದೆಯಡಿ 2019ರಲ್ಲಿ 9,027 ಬೈಕ್ ಸವಾರರ ವಿರುದ್ಧ ಪ್ರಕರಣ ದಾಖಲಾಗಿದ್ದು, ₹18,25,600 ದಂಡ, 2020ರಲ್ಲಿ (ಅ.31ರವರೆಗೆ) 7,042 ಪ್ರಕರಣ ದಾಖಲಾಗಿದ್ದು, ₹35,60,200 ದಂಡ ಸಂಗ್ರಹವಾಗಿದೆ. ಆದರೂ ಹೆಲ್ಮೆಟ್ ಧರಿಸುವುದಕ್ಕೆ ಬೈಕ್ ಸವಾರರು ಹೆಚ್ಚು ಆಸಕ್ತಿ ತೋರುತ್ತಿಲ್ಲ. ಇನ್ನಾದರೂ ಸವಾರರು ಜಾಗೃತರಾಗಬೇಕಿದೆ.