ರಾಯಚೂರು : ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಈಚನಾಳ ಗ್ರಾಮದಲ್ಲಿ ಜು.12 ರಂದು ನಡೆದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಮರೇಶ್ ಎಂಬುವನಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 55 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಲಿಂಗಸೂಗೂರು ತಾಲೂಕಿನ ಈಚನಾಳ ಗ್ರಾಮದ ಮಲ್ಲಿಕಾರ್ಜುನ ಎಂಬುವವರು ಹೊಲದಲ್ಲಿ ಕೆಲಸಮಾಡುತ್ತಿದ್ದಾಗ ಆರೋಪಿ ಅಮರೇಶ್ ಏಕಾಏಕಿ ಹಳೆಯ ವಿಷಯದಲ್ಲಿ ಕ್ಯಾತೆ ತೆಗೆದು ಮಲ್ಲಿಕಾರ್ಜುನನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನು. ಅಲ್ಲದೆ, ಮಲ್ಲಿಕಾರ್ಜುನನ ಮೇಲೆ ಕಬ್ಬಿಣದ ಆಯುಧಗಳಿಂದ ತೀವ್ರ ಹಲ್ಲೆ ನಡೆಸಿದ್ದನು.
ಘಟನೆ ಬಳಿಕ ಮಲ್ಲಿಕಾರ್ಜುನ ಲಿಂಗಸೂಗೂರು ಪೋಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ದೂರಿನ ಹಿನ್ನಲೆ ಆರಕ್ಷಕ ಉಪ ನಿರೀಕ್ಷಕ ಗುರುರಾಜ ಕಟ್ಟಿಮನಿ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಬೈಲೂರು ಶಂಕರರಾಮ ಅವರು ಆರೋಪಿಗೆ 5 ವರ್ಷ ಶಿಕ್ಷೆ ಹಾಗೂ 55,000 ಸಾವಿರ ದಂಡ ವಿಧಿಸಿದ್ದಾರೆ. ಈ ಮೊತ್ತದಲ್ಲಿ ಫಿರ್ಯಾದುದಾರ, ಸಂತ್ರಸ್ತ ಮಲ್ಲಿಕಾರ್ಜುನರಿಗೆ 50 ಸಾವಿರ ರೂ. ಪರಿಹಾರ ರೂಪವಾಗಿ ನೀಡಲು ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕ ಪಿ.ಎಕ್ಬಾಲ್ ಅಹ್ಮದ್ ಅವರು ವಾದ ಮಂಡಿಸಿದ್ದರು.