ರಾಯಚೂರು: ಇಂದು ರಾಯರ ಮಧ್ಯಾರಾಧನೆ. ಇದಕ್ಕಾಗಿ ಮಠದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. 350ನೇ ಆರಾಧನಾ ಮಹೋತ್ಸವ ಹಿನ್ನೆಲೆಯಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ವಿಶೇಷ ಅಭಿಷೇಕ ನಡೆಯಲಿದ್ದು, ಪೀಠಾಧಿಪತಿ ಸುಭುದೇಂದ್ರ ತೀರ್ಥರು ನೆರವೇರಿಸಲಿದ್ದಾರೆ.
ತಿರುಪತಿ ತಿರುಮಲ ದೇವಾಲಯದಿಂದ ರಾಯರಿಗೆ ಶೇಷ ವಸ್ತ್ರ ಸಮರ್ಪಿಸಲಾಗಿದೆ. ಮಠದಿಂದ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಬರಮಾಡಿಕೊಂಡು ರಾಯರ ಮೂಲಬೃಂದಾವನಕ್ಕೆ ಸಮರ್ಪಣೆ ಮಾಡಿದ್ದಾರೆ. ತಿರುಪತಿ ತಿರುಮಲ ದೇವಾಲಯದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಧರ್ಮಾಧಿಕಾರಿ ಧರ್ಮರೆಡ್ಡಿ ವಸ್ತ್ರವನ್ನು ತಿರುಮಲದಿಂದ ತಂದ ಬಳಿಕ, ಮಠದ ಪೀಠಾಧಿಪತಿ ಸುಭುದೇಂದ್ರ ತೀರ್ಥರು ಧಾರ್ಮಿಕ ಸಂಪ್ರದಾಯದಂತೆ ವಾದ್ಯ ಮೇಳದೊಂದಿಗೆ ಪ್ರದಕ್ಷಿಣೆ ಹಾಕಿದ ಬಳಿಕ ರಾಘವೇಂದ್ರ ಸ್ವಾಮಿಗಳಿಗೆ ಸಮರ್ಪಿಸಿದರು.
ಈ ವೇಳೆ ಟಿಟಿಡಿಯಿಂದ ಶೇಷ ವಸ್ತ್ರ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಧರ್ಮಾರೆಡ್ಡಿ ಅವರನ್ನು ಮಠದಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಪೀಠಾಧಿಪತಿಗಳು ಭಕ್ತರಿಗೆ ಆಶೀರ್ವಚನ ನೀಡಿದರು.