ರಾಯಚೂರು : ಜಿಲ್ಲೆಯಲ್ಲಿ ಹೊರರಾಜ್ಯದ ಜನರು ತುಂಗಭದ್ರಾ ನದಿ ದಾಟಿಕೊಂಡು ಅಕ್ರಮವಾಗಿ ಓಡಾಟ ನಡೆಸುತ್ತಿರುವುದು ಕಂಡುಬಂದಿದೆ.
ತಾಲೂಕಿನ ಗಿಲ್ಲೆಸೂಗೂರು ಗ್ರಾಮದ ಹೊರವಲಯದಲ್ಲಿರುವ ತುಂಗಭದ್ರಾ ನದಿಯ ಬಳಿ ಆಂಧ್ರದ ಜನರು ಓಡಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದಾಗಿ ಜಿಲ್ಲೆಯ ಜನತೆಗೆ ಕೊರೊನಾ ಆತಂಕ ಎದುರಾಗಿದೆ.
ಗಡಿಭಾಗದಲ್ಲಿ ಜಿಲ್ಲಾಡಳಿತ ಚೆಕ್ ಪೋಸ್ಟ್ ನಿರ್ಮಿಸಿದೆ. ಬೇರೆ ಜಿಲ್ಲೆಯಿಂದ ಬರುವ ವಾಹನ ತಪಾಸಣೆ ಮತ್ತು ಜನರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಇದರ ಮಧ್ಯೆ ಕೆಲವು ಜನರು ಆಂಧ್ರದಿಂದ ಜಿಲ್ಲೆಗೆ ಬರುತ್ತಿದ್ದಾರೆ. ಇನ್ನೂ ಕೆಲವರು ಆಂಧ್ರದಿಂದ ರಾಯಚೂರಿಗೆ, ರಾಯಚೂರಿನಿಂದ ಆಂಧ್ರಕ್ಕೆ ಜಿಲ್ಲಾಡಳಿತ ಕಣ್ಣುತಪ್ಪಿಸಿ ಓಡಾಟ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. ಆದರೆ ಈ ರೀತಿಯಾಗಿ ಅಕ್ರಮ ಓಡಾಟ ನಡೆಸುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.