ರಾಯಚೂರು : ಶಾಸಕರು ವಿತರಿಸಿದ ಆಹಾರ ಕಿಟ್ನಲ್ಲಿ ಹುಳು, ನುಸಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಮದರಕಲ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಲಾಕ್ ಡೌನ್ ವೇಳೆ ಹಟ್ಟಿ ಚಿನ್ನದ ಗಣಿ ಕಂಪನಿ, ತಹಶೀಲ್ದಾರ್ ಮೂಲಕ ಬಡವರಿಗೆ ಹಂಚಿಕೆ ಮಾಡಲು 2 ಸಾವಿರ ಫುಡ್ ಕಿಟ್‌ಗಳನ್ನ ನೀಡಿತ್ತು ಎನ್ನಲಾಗಿದೆ. ಲಾಕ್ ಡೌನ್ ವೇಳೆಯಲ್ಲಿ ಫುಡ್ ಕಿಟ್‌ಗಳನ್ನ ಹಂಚಿಕೆ ಮಾಡಿರಲಿಲ್ಲ. ನಂತರ ಇವನ್ನು 2021 ಫೆ.13ರಂದು ಶಾಸಕ ಶಿವನಗೌಡ ನಾಯಕ ವಿತರಿಸಿದ್ದು, ಫುಡ್ ಕಿಟ್ ಗಳಲ್ಲಿ ಹುಳು, ನುಸಿ ಪತ್ತೆಯಾಗಿವೆ ಎನ್ನುವ ಆರೋಪ ಕೇಳಿಬಂದಿದೆ. ಫುಡ್ ಕಿಟ್‌ಗಳನ್ನ ವಿತರಣೆ ಮಾಡಿದ ನಂತರ ಮನೆಗೆ ತಂದು ನೋಡಿದಾಗ ಹಾಳಾದ ಪದಾರ್ಥಗಳನ್ನ ಕಂಡು ಶಾಸಕರು ಹಾಗೂ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.