ರಾಯಚೂರು: ದೇಶದಾದ್ಯಂತ ಕೊರೊನಾ ವೈರಸ್ ಭೀತಿ ದಿನನಿತ್ಯ ಹೆಚ್ಚಾಗುತ್ತಲೇ ಇದೆ. ಈ ನಡುವೆ ರಾಜ್ಯದಲ್ಲಿ ಹಕ್ಕಿಜ್ವರದ ಭೀತಿಯೂ ಎದುರಾಗಿದೆ. ಕೊರೊನಾ ಹರಡುವಿಕೆಯ ನಡುವೆ ರಾಯಚೂರಿನ ಮಾನ್ವಿ ತಾಲೂಕಿನ ನಸಲಾಪುರ ಬಳಿ 30 ಪಕ್ಷಿಗಳು ಒಂದೇ ಕಡೆ ಸತ್ತು ಬಿದ್ದಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಟ್ರೈ ಕಲರ್ ಮುನಿಯಾ ಪ್ರಬೇಧದ ಪಕ್ಷಿಗಳು ಹಾಗೂ ಎರಡು ಇಂಡಿಯನ್ ಸಿಲ್ವರ್ ಬಿಲ್ಸ್ ಹಕ್ಕಿಗಳು ಸತ್ತು ಬಿದಿದ್ದು, ಒಂದೇ ಕಡೆ ಇಷ್ಟೊಂದು ಹಕ್ಕಿಗಳು ಮೃತಪಟ್ಟಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ಅರಣ್ಯ ಇಲಾಖೆ, ಪಶುಪಾಲನಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಳಿಕ ಪಕ್ಷಿಗಳ ಮಾದರಿಗಳನ್ನು ಪ್ರಯೋಗಲಾಯಕ್ಕೆ ಕಳುಹಿಸಿರುವುದಾಗಿ ಪಶುಪಾಲಾನಾ ಉಪ ನಿರ್ದೇಶಕ ವಾಲ್ಮೀಕಿ ಬಿ.ವೈ. ತಿಳಿಸಿದ್ದು, ಹಕ್ಕಿಗಳ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬರ್ಡ್ ಫ್ಲ್ಯೂ, ವಿಷಾಹಾರ ಸೇವನೆ ಇಲ್ಲವೇ ಬಿಸಿಲಿನ ತಾಪದಿಂದ ಸಾವನಪ್ಪಿರಬಹುದು. ವರದಿ ಬಳಿಕ ನಿಖರ ಮಾಹಿತಿ ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.