ರಾಯಚೂರು: ಅನಾರೋಗ್ಯದ ಕಾರಣ ಇಲ್ಲಿನ ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಈ ಮಹಿಳೆಯಿಂದ ಸಂಗ್ರಹಿಸಿದ್ದ ಗಂಟಲು ದ್ರವ ಹಾಗೂ ರಕ್ತದ ಮಾದರಿ ಟೆಸ್ಟ್ ರಿಪೋರ್ಟ್ ಬಂದಿದ್ದು, ಕೊರೊನಾ ವಿರುದ್ಧ ನೆಗೆಟಿವ್ ಎಂದು ತಿಳಿದು ಬಂದಿದೆ. ಹೀಗಾಗಿ ಜಿಲ್ಲೆಯ ಜನರಲ್ಲಿದ್ದ ಆತಂಕ ದೂರವಾಗಿದೆ.
ಮಸ್ಕಿ ಮೂಲದ ರೇಣುಕಾ (40) ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಕೊರೊನಾ ಶಂಕೆ ವ್ಯಕ್ತವಾದ ಕಾರಣ ರಕ್ತ, ಗಂಟಲು ದ್ರವದ ಮಾದರಿ ಪರೀಕ್ಷೆಗೊಳಪಡಿಸಲಾಗಿತ್ತು. ಆದರೆ ಟೆಸ್ಟ್ ನೆಗೆಟಿವ್ ಬಂದಿರುವ ಕಾರಣ ಸಾವಿಗೆ ಕಾರಣ ಕೊರೊನಾ ಸೋಂಕು ಕಾರಣ ಅಲ್ಲ ಎಂಬುದು ಕನ್ಫರ್ಮ್ ಆಗಿದೆ.
ಉಸಿರಾಟ ಹಾಗೂ ಆರೋಗ್ಯ ಸಮಸ್ಯೆಯಿಂದ ಮಸ್ಕಿ ಹೊರವಲಯದ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾ ಕಳೆದ ಗುರುವಾರ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಅವರ ರಕ್ತದ ಮಾದರಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ಆಸ್ಪತ್ರೆಗೆ ದಾಖಲಾದ ರೇಣುಕಾಗೆ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಜಿಲ್ಲಾಡಳಿತ ಮಾಹಿತಿ ನೀಡಿದ್ದು, ಸ್ಪಷ್ಟಪಡಿಸುವ ಮೂಲಕ ಪ್ರಕಟಣೆ ಹೊರಡಿಸಿದೆ.