ರಾಯಚೂರು: ನೋ ಪಾರ್ಕಿಂಗ್ (ವಾಹನ ನಿಲುಗಡೆ ನಿಷೇಧ) ಜಾಗದಲ್ಲಿ ವಾಹನ ನಿಲುಗಡೆ ಹೆಚ್ಚಾಗಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಅಲ್ಲದೇ, ಅಪಘಾತಕ್ಕೂ ಕಾರಣವಾಗಿದೆ. ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಪರಿಣಾಮ ರಸ್ತೆಗಳೇ ಪಾರ್ಕಿಂಗ್ ಜಾಗಗಳಾಗಿ ಮಾರ್ಪಟ್ಟಿವೆ.
ನಗರದ ಪ್ರಮುಖ ವೃತ್ತ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ನಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ವಾಹನಗಳ ನಿಲುಗಡೆ ಮಾಡಲಾಗುತ್ತದೆ. ನೋ ಪಾರ್ಕಿಂಗ್ ಫಲಕ ಇದ್ದರೂ ನಿಯಮ ಉಲ್ಲಂಘಿಸಿ ವಾಹನ ನಿಲ್ಲಿಸಲಾಗುತ್ತಿದೆ. ಆದರೆ, ಅಧಿಕಾರಿ ವರ್ಗ ಕಣ್ಮುಚ್ಚಿ ಕುಳಿತಿದೆ. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತೊಂದರೆ ತಪ್ಪಿದಲ್ಲ.
ಇದನ್ನೂ ಓದಿ...ನೋ ಪಾರ್ಕಿಂಗ್.. ಸರ್ಕಾರಕ್ಕೆ ತಲೆನೋವು.. ಸಾರ್ವಜನಿಕರಿಗೆ ಕಿರಿಕಿರಿ..!
ವ್ಯಾಪಾರ ವಹಿವಾಟು ನಡೆಯುವ ಪಟೇಲ್ ರಸ್ತೆಯಲ್ಲಿ, ಬಂಗಾರ ಬಂಜಾರ್, ಮಾರುಕಟ್ಟೆ, ಗಾಂಧಿ ವೃತ್ತ, ಮಹಾವೀರ ಚೌಕ, ಮಹಾತ್ಮಗಾಂಧಿ ರಸ್ತೆ, ತೀನ್ ಕಂದಿಲ್, ಚಂದ್ರಮೌಳೇಶ್ವರ ಸರ್ಕಲ್ ಮುಖ್ಯ ರಸ್ತೆಯಲ್ಲಿ ಬೆಸ ಸಂಖ್ಯೆ ಬರುವ ದಿನಾಂಕದಂದು ಒಂದು ಕಡೆ ಪಾರ್ಕಿಂಗ್ ಹಾಗೂ ಸಮ ಸಂಖ್ಯೆ ದಿನಾಂಕದ ಒಂದು ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕೆಲವೆಡೆ ವಾಹನಗಳ ಪಾರ್ಕಿಂಗ್ಗೆ ದಿನಾಂಕ ನಿಗದಿಪಡಿಸಿಲ್ಲ. ಹೀಗಾಗಿ, ಅಡ್ಡಾದಿಡ್ಡಿ ವಾಹನ ನಿಲುಗಡೆಗೆ ಮಾಡಲಾಗುತ್ತಿದೆ.
ರಸ್ತೆಗಳಲ್ಲೇ ಪಾರ್ಕಿಂಗ್ ಮಾಡುವ ಕಾರಣ ಸಂಚಾರಕ್ಕೆ ಕಷ್ಟವಾಗಿದೆ. ಆ್ಯಂಬುಲೆನ್ಸ್ ಸೇವೆ ಸೇರಿದಂತೆ ತುರ್ತು ಕೆಲಸಗಳಿಗೆ ತೊಂದರೆ ಉಂಟಾಗುತ್ತಿದೆ. ಜಿಲ್ಲೆಯಲ್ಲಿ ಈ ವರ್ಷದ ಆರಂಭದಿಂದ ಈವರೆಗೂ 688 ಪ್ರಕರಣಗಳು ದಾಖಲಾಗಿವೆ. ₹5,91,900 ದಂಡ ಸಂಗ್ರಹವಾಗಿದೆ.