ರಾಯಚೂರು: ಸೂಕ್ತ ಚಿಕಿತ್ಸೆ ನೀಡದೆ ರಿಮ್ಸ್ ಆಸ್ಪತ್ರೆಯ ವೈದ್ಯರು ನಿರ್ಲಕ್ಷ್ಯ ತೋರಿದ್ದರಿಂದ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.
ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಗ್ರಾಮದ ವಿದ್ಯಾರ್ಥಿನಿ ನಾಗಮ್ಮ(14) ಮೃತ ವಿದ್ಯಾರ್ಥಿನಿ. ವಾಂತಿ, ಭೇದಿಯಿಂದ ನರಳುತ್ತಿದ್ದ ನಾಗಮ್ಮನನ್ನು ಮೊದಲು ಕವಿತಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದರು. ಅಂತೆಯೇ ರಿಮ್ಸ್ ಆಸ್ಪತ್ರೆಗೆ ಕರೆತಂದಾಗ ಇಲ್ಲಿನ ವೈದ್ಯರು ಸೂಕ್ತ ಚಿಕಿತ್ಸೆ ನೀಡದ ಕಾರಣ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಎಂದು ಆರೋಪಿಸಲಾಗಿದೆ.
ಚಿಕಿತ್ಸೆಗೆ ಕರೆತಂದ ವಿದ್ಯಾರ್ಥಿನಿಯನ್ನ ಓಪಿಡಿಯಿಂದ ತುರ್ತು ಚಿಕಿತ್ಸಾ ಘಟಕಕ್ಕೆ, ತುರ್ತು ಚಿಕಿತ್ಸೆಯಿಂದ ಓಪಿಡಿ ಅಲೆದಾಡಿಸಿದರು. ಮೂರು ಗಂಟೆಗಳ ಕಾಲ ಯಾವುದೇ ರೀತಿಯ ಚಿಕಿತ್ಸೆ ನೀಡಲಿಲ್ಲ ಎಂದು ಮೃತ ಬಾಲಕಿ ಪೋಷಕರು ದೂರಿದ್ದಾರೆ. ಬಾಲಕಿಯನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಇನ್ನು ರಿಮ್ಸ್ ಆಸ್ಪತ್ರೆಯ ವೈದ್ಯರೆಲ್ಲ ಖಾಸಗಿ ಕ್ಲಿನಿಕ್ನಲ್ಲಿ ಕೆಲಸ ಮಾಡುತ್ತಿದ್ದು, ಹೆಚ್ಚಿನ ಸಮಯ ಅಲ್ಲಿಯೇ ಕಳೆಯುತ್ತಾರೆ. ಇದರಿಂದ ಸರ್ಕಾರಿ ಆಸ್ಪತ್ರೆಯನ್ನೇ ನಂಬಿಕೊಂಡು ಬರುವ ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ. ವಿದ್ಯಾರ್ಥಿನಿ ಸಾವಿಗೆ ಕಾರಣರಾದ ವೈದ್ಯರ ವಿರುದ್ಧ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಪ್ರಗತಿಪರ ಸಂಘಟನೆ ಮುಖಂಡ ಆರ್. ಮಾನಸಯ್ಯ ಆಕ್ರೋಶ ವ್ಯಕ್ತಪಡಿಸಿದರು.