ಮೈಸೂರು: ಚಾಮುಂಡೇಶ್ವರಿ, ಮಹಿಷಾಸುರ, ಶ್ರೀಕೃಷ್ಣ, ಆಂಜನೇಯ ವೇಷಧಾರಿಯಾಗಿದ್ದ ಮಕ್ಕಳು ನೃತ್ಯ ಮಾಡಿ ಯುವ ಸಂಭ್ರಮದ ಎರಡನೇ ದಿನ ಮತ್ತಷ್ಟು ರಂಗೇರಿತ್ತು.
ಮೈಸೂರಿನ ಮಾನಸ ಗಂಗೋತ್ರಿಯಲ್ಲಿರುವ ಬಯಲು ರಂಗಮಂದಿರದಲ್ಲಿ ಬುಧವಾರ ನಡೆದ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಮೈಸೂರಿನ ಶ್ರೀಕಂಠೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು, ಹೆಚ್.ಡಿ.ಕೋಟೆ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯಳಂದೂರಿನ ವೈ.ಎಂ.ಮಲ್ಲಿಕಾರ್ಜುನ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿ ನೆರೆದಿದ್ದವರನ್ನೂ ಕುಣಿದು ಕುಪ್ಪಳಿಸುವಂತೆ ಮಾಡಿದರು.
ಕೆ.ಆರ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಾಡುಗಳಿಗೆ ಹೆಜ್ಜೆ ಹಾಕಿ ರಾಷ್ಟ್ರೀಯ ಹಾಗೂ ಧಾರ್ಮಿಕ ಭಾವೈಕ್ಯತೆ ಮೆರೆದರು. ನಂಜನಗೂಡಿನ ಜೆಎಸ್‌ಎಸ್ ಪಿಯುಸಿ ಕಾಲೇಜಿನ ಮಕ್ಕಳು ಮಲೆ ಮಹದೇಶ್ವರನ ಕುರಿತ ಹಾಡಿಗಳಿಗೆ ಹೆಜ್ಜೆ ಹಾಕಿದರು.
ಬಣ್ಣ ಬಣ್ಣದ ವೇಷಭೂಷಣ ತೊಟ್ಟು ಮಹಿಷಾಸುರ ಮರ್ದಿನಿ ಹಾಗೂ ವಿಶ್ವವಿಖ್ಯಾತ ದಸರಾ ವೈಭವ ಸಾರುವ ಹಾಡುಗಳಿಗೆ ವಿಶೇಷ ಮಕ್ಕಳು ಮಾಡಿದ ನೃತ್ಯ ಪ್ರೇಕ್ಷಕರ ಕಣ್ಮನ ಸೆಳೆದಿದ್ದು, ಸಭಿಕರಿಂದ ಉತ್ಸಾಹ, ಚಪ್ಪಾಳೆ ಅನುರಣಿಸುತ್ತಿತ್ತು. ವಿವಿಧ ಕಾಲೇಜಿನ 20ಕ್ಕೂ ಹೆಚ್ಚು ತಂಡಗಳು ವೇದಿಕೆಯಲ್ಲಿ ಸಾಂಸ್ಕೃತಿಕ ಸಿರಿಯನ್ನು ಬಿತ್ತಿದವು.