ಮೈಸೂರು : ಯುವತಿಯರನ್ನ ಪ್ರೀತಿಸುವಂತೆ ನಂಬಿಸಿ, ಅವರ ಹೆಸರನ್ನ ಎದೆಯ ಭಾಗದಲ್ಲಿ ಹಚ್ಚೆ ಹಾಕಿಸಿಕೊಂಡು, ಪ್ರೀತಿಸುವಂತೆ ಯುವತಿಯರನ್ನ ಮರಳು ಮಾಡಿ ವಂಚಿಸುತ್ತಿದ್ದ ಯುವಕನನ್ನ ಮೈಸೂರು ಗ್ರಾಮಾಂತರ ಉಪವಿಭಾಗದ ಪೊಲೀಸರು ಬಂಧಿಸಿದ್ದು, ಇದೀಗ ತನಿಖೆ ಕೈಗೊಂಡಿದ್ದಾರೆ. ಹೀಗೆ ಯುವತಿಯರನ್ನು ಪ್ರೀತಿಸುವ ನೆಪದಲ್ಲಿ ವಂಚಿಸುತ್ತಿದ್ದ ಆರೋಪಿ ಯುವಕ ಪ್ರವೀಣ್ ಕುಮಾರ್ ಎಂಬುದಾಗಿ ತಿಳಿದು ಬಂದಿದೆ. ಈತ ಮೈಸೂರು ಜಿಲ್ಲೆಯ ಕೆ ಆರ್ ನಗರದ ನಿವಾಸಿಯಾಗಿದ್ದು, ಅಲ್ಲದೇ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮಗ ಎನ್ನಲಾಗಿದೆ. ಈ ಯುವಕ ಇಲ್ಲಿಯವರೆಗೆ ನಾಲ್ಕಕ್ಕೂ ಹೆಚ್ಚು ಯುವತಿಯರಿಗೆ ಮೋಸ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ಗೊತ್ತಾಗಿರುವ ಬಗ್ಗೆ ಪೊಲೀಸ್ ಮೂಲಗಳು ತಿಳಿಸಿವೆ.
ಶಿಕ್ಷಕರ ಮಕ್ಕಳೇ ಟಾರ್ಗೆಟ್ : ಆರೋಪಿ ಪ್ರವೀಣ್ ಕುಮಾರ್ ಶಿಕ್ಷಕರ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡಿ ಪ್ರೀತಿಸುವ ನಾಟಕವಾಡಿ, ಅವರನ್ನು ನಂಬಿಸಲು ಯುವತಿಯರ ಹೆಸರನ್ನು ತನ್ನ ಎದೆಯ ಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಿದ್ದನಂತೆ. ನಂತರ ಅವರನ್ನು ಪ್ರೀತಿಸುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ ಎಂಬುದಾಗಿ ತಿಳಿದು ಬಂದಿದೆ.
ಇದನ್ನೂ ಓದಿ : ಮಂಗಳೂರು ಜ್ಯುವೆಲ್ಲರಿ ಅಂಗಡಿ ಸಿಬ್ಬಂದಿ ಕೊಲೆ: ಕೇರಳದಲ್ಲಿ ಆರೋಪಿ ಸೆರೆ
ಎಸ್ಪಿ ಸೂಚನೆ ಮೇರೆಗೆ ತನಿಖೆ : ಈತನಿಂದ ಮೋಸಕ್ಕೆ ಒಳಗಾದ ಯುವತಿಯೊಬ್ಬಳು, ಒಡನಾಡಿ ಸೇವಾ ಸಂಸ್ಥೆಯ ನೆರವಿನಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನ ಭೇಟಿ ಮಾಡಿ, ಘಟನೆಯ ಬಗ್ಗೆ ಸವಿವರವಾಗಿ ತಿಳಿಸಿದ್ದರು. ಇದೀಗ ಎಸ್ಪಿ ಅವರ ಸೂಚನೆ ಮೇರೆಗೆ ಮೈಸೂರು ಗ್ರಾಮಾಂತರ ಉಪವಿಭಾಗದ ಪೊಲೀಸ್ ಅಧಿಕಾರಿಗಳು ಆರೋಪಿಯನ್ನ ಬಂಧಿಸಿ ತನಿಖೆ ಕೈಗೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ತನಿಖೆಯಲ್ಲಿ ಇಬ್ಬರಿಗೂ ವಂಚಿಸಿರುವ ಘಟನೆ ಬೆಳಕಿಗೆ: ಈ ಆರೋಪಿ ವಿರುದ್ಧ ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ವಂಚನೆಗೊಳಗಾದ ಯುವತಿಯೊಬ್ಬಳು 2017ರಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಆನಂತರ ಮತ್ತೆ ಇಬ್ಬರು ಯುವತಿಯರಿಗೂ ಪ್ರೀತಿಸುವ ನೆಪದಲ್ಲಿ ವಂಚನೆ ಮಾಡಿರುವುದು ತನಿಖೆ ವೇಳೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಇದನ್ನೂ ಓದಿ : ಲಂಚ ಸ್ವೀಕರಿಸಿದ ಆರೋಪ ಸಾಬೀತು: ಗ್ರಾಮಕರಣಿಕನಿಗೆ ನಾಲ್ಕು ವರ್ಷ ಸಜೆ, 70 ಸಾವಿರ ರೂ ದಂಡ..
ಯಾರಿಗೂ ಹೆದರದೆ ಧೈರ್ಯವಾಗಿ ತಿರುಗಾಡುತ್ತಿದ್ದ ಆರೋಪಿ : ಈ ಯುವಕ ಯುವತಿಯರನ್ನ ಪ್ರೀತಿಸುವಂತೆ ವಂಚಿಸಿ, ನಾನೊಬ್ಬ ನಿವೃತ್ತ ಪೊಲೀಸ್ ಅಧಿಕಾರಿಯ ಮಗ ಎಂಬ ಗತ್ತಿನಿಂದ ಯಾರಿಗೂ ಹೆದರದೇ ಧೈರ್ಯವಾಗಿ ಓಡಾಡುತ್ತಿದ್ದ ಎಂಬುದು ತಿಳಿದುಬಂದಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಅವರನ್ನು ಈಟಿವಿ ಭಾರತ್ ಮಾತನಾಡಿಸಿದಾಗ, ಆರೋಪಿಯ ವಿರುದ್ದ ಯುವತಿಯೊಬ್ಬಳ ದೂರಿನ ಹಿನ್ನೆಲೆಯಲ್ಲಿ ಆತನನ್ನ ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಚಾಮರಾಜನಗರ: ಸಿಹಿ ತಿಂಡಿ ಎಂದು ಇರುವೆ ಪೌಡರ್ ತಿಂದು ಬಾಲಕ ಸಾವು