ಮೈಸೂರು: ಯಡಿಯೂರಪ್ಪಗೆ ಸರ್ಕಾರ ಉಳಿಸಿಕೊಳ್ಳುವ ಕಲೆ ಇದೆ ಮತ್ತು ಅನುಭವ ಇದೆ. ಸರ್ಕಾರ ಹೇಗೆ ಉಳಿಸಿಕೊಳ್ಳಬೇಕೆಂದು ಅವರಿಗೆ ಗೊತ್ತಿದೆ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಇಂದು ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಗ್ರಾಮಯೊಂದರ ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಇಂದಿನ ರಾಜಭವನ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಬಂದಿಲ್ಲ. ಉಪಚುನಾವಣೆಯಲ್ಲಿ ಗೆದ್ದವರಿಗೆ ಸಚಿವ ಸ್ಥಾನ ನೀಡಿರುವುದು ಅವರ ಪಕ್ಷದ ಹಣೆಬರಹ, ನಾನು ಅದರ ಬಗ್ಗೆ ತಲೆಕೆಡಿಸುಕೊಳ್ಳುವುದಿಲ್ಲ. ಸರ್ಕಾರವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದು ಯಡಿಯೂರಪ್ಪಗೆ ಗೊತ್ತಿದೆ ಎಂದರು.
10 ಜನರನ್ನು ಮಂತ್ರಿ ಮಾಡಿರುವುದು ಮೂಲ ಬಿಜೆಪಿಯವರನ್ನು ಅಸಮಾಧಾನಕ್ಕೆ ಕಾರಣವಾಗಿದೆ. ಅವರು ಕಡುಬು ಕಡಿದುಕೊಂಡು ಇರುತ್ತಾರಾ, ಇದು ಎಲ್ಲಿಗೆ ಬರುತ್ತದೆ ಕಾದು ನೋಡೋಣ ಎಂದ ಕುಮಾರಸ್ವಾಮಿ, ಮಂಡ್ಯದಲ್ಲಿ ಅಭಿವೃದ್ಧಿ ಆಗಿಲ್ಲ. ಈಗ ಮಂಡ್ಯ ಜಿಲ್ಲೆಯ ಸಚಿವರಾಗಿದ್ದಾರೆ ಅವರು ಏನು ಅಭಿವೃದ್ಧಿ ಮಾಡುತ್ತಾರೋ ನೋಡೋಣ ಎಂದರು.
ಇನ್ನೂ ಯುಗಾದಿವರೆಗೆ ಸರ್ಕಾರಕ್ಕೆ ತೊಂದರೆ ಇಲ್ಲ ಎಂದು ಕೋಡಿ ಮಠದ ಶ್ರೀಗಳು ಹೇಳಿದ್ದಾರೆ. ಆ ಬಗ್ಗೆ ನಾನು ಭವಿಷ್ಯಗಾರನಲ್ಲ ಎಂದ ಕುಮಾರಸ್ವಾಮಿ, ನಮ್ಮ ಕಾಲದಲ್ಲಿ ತೃಪ್ತಿ ಹೊಂದದವರು ಇವಾಗ ತೃಪ್ತಿ ಹೊಂದಿದ್ದಾರೆ. ಕಾದು ನೋಡೋಣ ಎಂದು ಮಾರ್ಮಿಕವಾಗಿ ನುಡಿದ್ದಾರೆ.