ಮೈಸೂರು: ಬಹಿರ್ದೆಸೆಗೆ ತೆರಳಿದ್ದ ಮಹಿಳೆಯೊಬ್ಬಳು ನಿಗೂಢವಾಗಿ ಮೃತಪಟ್ಟ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆಕೆಯ ಮಗಳನ್ನು ಪ್ರೀತಿಸುತ್ತಿದ್ದವನೇ ಕೊಲೆ ಆರೋಪಿ ಎಂಬುದು ತನಿಖೆಯಿಂದ ಬಯಲಾಗಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ದಿನದಂದೇ ಮಹಿಳೆಯೂ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಜನರನ್ನು ಬೆಚ್ಚಿಬೀಳಿಸಿತ್ತು.
ಮಹಿಳೆ ತನ್ನ ಮಗಳ ಪ್ರೀತಿಗೆ ಅಡ್ಡಿಯಾಗಿದ್ದೇ ಕೊಲೆಗೆ ಕಾರಣ ಎಂದು ಬಂಧಿತ ಆರೋಪಿ ಬಾಯ್ಬಿಟ್ಟಿದ್ದಾನೆ. ಟಿ.ನರಸೀಪುರ ಪೊಲೀಸರು ಆರೋಪಿ ಮಹೇಶ್ ಕುಮಾರ್ (23) ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರೀತಿಗಾಗಿ ಕೊಲೆ:
ಕಳೆದ ಆಗಸ್ಟ್ 24ರಂದು ಬಹಿರ್ದೆಸೆಗೆ ಹೋಗಿದ್ದ ಮೂಗೂರು ಗ್ರಾಮದ ಭಾಗ್ಯಲಕ್ಷ್ಮಿ ಎಂಬವರ ಮೃತದೇಹ ಟಿ.ನರಸೀಪುರ ತಾಲೂಕಿನ ಹೊಸಹಳ್ಳಿ ಸೇತುವೆ ಬಳಿ ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಆರಂಭಿಸಿದ್ದು, ಈ ಸಂಬಂಧ ಆರೋಪಿ ಮಹೇಶ್ ಕುಮಾರ್ನನ್ನು ಬಂಧಿಸಿದ್ದಾರೆ.
ತಾನು ಕೊಲೆಯಾದ ಭಾಗ್ಯಲಕ್ಷ್ಮಿಯ ಮಗಳನ್ನು ಪ್ರೀತಿಸುತ್ತಿದ್ದು, ಪ್ರೀತಿಗೆ ಆಕೆ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ತಲೆಗೆ ಗುದ್ದಲಿಯಿಂದ ಹಲ್ಲೆ ಮಾಡಿ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಪ್ರಕರಣದ ಸಂಬಂಧ ಟಿ.ನರಸೀಪುರ ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: ವಿದ್ಯುತ್ ಸ್ಪರ್ಶಿಸಿ ಮೂವರು ಮಕ್ಕಳು ಸೇರಿ ಐವರ ದುರ್ಮರಣ.. ಒಬ್ಬರ ಪ್ರಾಣ ಉಳಿಸಲು ಹೋಗಿ ಸಾವು