ಮೈಸೂರು: ಸಿದ್ದರಾಮಯ್ಯ ಜನಪ್ರಿಯ ನಾಯಕರು ಅವರಿಗೆ ಎಲ್ಲ ಕಡೆ ಬೆಂಬಲ ಇದೆ. ವರುಣಾದಿಂದ ಸ್ಪರ್ಧೆ ಮಾಡುವಂತೆ ನಾವು ಕೇಳಿದ್ದೆವು. ಆದರೆ, ಕೋಲಾರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ಅವರು ಈ ರಾಜ್ಯದ ನಾಯಕರು, ಎಲ್ಲೇ ಸ್ಪರ್ಧೆ ಮಾಡಿದರೂ ಅವರಿಗೆ ಜನ ಬೆಂಬಲ ಇರುತ್ತದೆ ಎಂದು ಮೈಸೂರಿನ ಪತ್ರಿಕಾ ಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವವನಾರಾಯಣ್ ಹೇಳಿಕೆ ನೀಡಿದ್ದಾರೆ.
ಮೈಸೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷರು, ಸಿದ್ದರಾಮಯ್ಯ ಅವರು ಮೈಸೂರಿನವರು ಎಂಬ ಹೆಮ್ಮೆ ನಮಗೆ ಇದೆ. ಅವರು ಎಲ್ಲೇ ನಿಂತರೂ ಗೆಲ್ಲುತ್ತಾರೆ. ಅವರು ಜಿಲ್ಲೆಗೆ ಸೀಮಿತವಾದ ನಾಯಕರಲ್ಲ. ವರುಣಾದಲ್ಲಿ ಅವರು ಬಂದಿದ್ದರೆ ಚೆನ್ನಾಗಿತ್ತು. ಅವರು ಅಲ್ಲಿಂದಲೇ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ. ಅವರು ಅಲ್ಲಿಯೇ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ವಿರುದ್ಧ ಟೀಕೆ: ಬಿಜೆಪಿಯವರಿಗೆ ಚುನಾವಣಾ ಸಂದರ್ಭದಲ್ಲಿ ಡಾ. ಬಿ ಆರ್. ಅಂಬೇಡ್ಕರ್ ಹಾಗೂ ದಲಿತರ ಸ್ಮರಣೆ ಮಾಡುತ್ತಾರೆ. ಇವರು ಎಸ್ಸಿ, ಎಸ್ಟಿ ಮಿಸಲಾತಿಯನ್ನು ಶೇ 5 ರಷ್ಟು ಹೆಚ್ಚಿನ ಶೆಡ್ಯೂಲ್ಗೆ ಅಂದರೆ 9ಕ್ಕೆ ಸೇರ್ಪಡೆ ಅದರಷ್ಟೇ ಮಾನ್ಯವಾಗುತ್ತದೆ. ಆದರೆ, ಕೇಂದ್ರ ಸಚಿವ ನಾರಾಯಣಸ್ವಾಮಿ ಮೀಸಲಾತಿ ಹೆಚ್ಚಳ ಪ್ರಸ್ತಾವನೆ ನಮ್ಮ ಮುಂದೆ ಇಲ್ಲ ಎನ್ನುವ ಮೂಲಕ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಮೀಸಲಾತಿ ರಾಜಕೀಯ ಗಿಮಿಕ್ಸ್ ಎಂದು ತೋರುತ್ತದೆ ಎಂದು ಟೀಕಿಸಿದರು.
ದಲಿತರ ಮೇಲೆ ನಿಜಕ್ಕೂ ಪ್ರೀತಿ ಇದ್ದರೆ ಜೊತೆಗೆ ಮೀಸಲಾತಿ ಕೊಡುವ ಮನಸ್ಸಿದ್ದರೆ ರಾಜ್ಯದಲ್ಲಿ ಖಾಲಿ ಇರುವ 2.5 ಲಕ್ಷ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಿ, ಈ ಬಗ್ಗೆ ಮೀಸಲಾತಿ ಅನ್ವಯ ನೋಟಿಫಿಕೇಶನ್ ಹೊರಡಿಸಿ. ಅಭಿವೃದ್ಧಿ ವಿಚಾರದಲ್ಲಿ ಮಾತನಾಡುವುದಿಲ್ಲ, ಆದರೆ, ಚುನಾವಣೆ ಬಂದಾಗ ಮಾತ್ರ ದಲಿತರ ಮೇಲೆ ಪ್ರೀತಿಯನ್ನ ಬಿಜೆಪಿಯವರು ತೋರಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಬೆಂಗಳೂರು ಮೈಸೂರು ನಡುವಿನ ದಶಪಥ ರಸ್ತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನ ಪ್ರಸ್ತಾವನೆ ಮಾಡಲಾಗಿದೆ. ಅದನ್ನ ಯಾರು ತಡೆ ಹಿಡಿಯಬಾರದೆಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ : ಡಾ.ಬಿ ಆರ್. ಅಂಬೇಡ್ಕರ್ ಏಕರೂಪ ನಾಗರಿಕ ಸಂಹಿತೆ ಪರವಾಗಿ ಇದ್ದರು. ಅಂಬೇಡ್ಕರ್ ಯಾವಾಗಲೂ ಜಾತ್ಯತೀತರಾಗಿದ್ದರು. ನಮ್ಮ ದೇಶವನ್ನು ಜಾತ್ಯತೀತ ದೇಶ ಮಾಡಲು ಹೊರಟಿದ್ದರು. ಅಂಬೇಡ್ಕರ್ ಮೇಲೆ ನಿಜಕ್ಕೂ ಪ್ರೀತಿ ಇದ್ದರೆ ನಮ್ಮದು ಜಾತ್ಯತೀತ ದೇಶ ಎಂದು ಸಿ ಟಿ. ರವಿ ಹೇಳಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಬಗ್ಗೆ ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಆಗಲಿ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ, ದೇಶದಲ್ಲಿ ಅತಿ ಹೆಚ್ಚು ದಲಿತರ ಏಳಿಗೆಗೆ ಕಾರ್ಯಕ್ರಮ ನೀಡಿದ ಪಕ್ಷ ಕಾಂಗ್ರೆಸ್, ಹೀಗಾಗಿ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಗೆ ಬೆಂಕಿ ಹಚ್ಚಿ ಕೊಲೆ.. ಬೆಚ್ಚಿಬಿದ್ದ ಮಂಡ್ಯ ಜಿಲ್ಲೆ