ಮೈಸೂರು: ಮಹದಾಯಿ ಗೆಜೆಟ್ ನೋಟಿಫಿಕೇಶನ್ ಬಗ್ಗೆ ನಮಗೆ ತೃಪ್ತಿ ಇಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದರು.
ಇಂದು ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಗುದ್ದಲಿಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ನೋಟಿಫಿಕೇಶನ್ ರಿಮ್ಯಾಂಡ್ ಮಾಡುತ್ತಿದ್ದೇವೆ. ನಮಗೆ 13.50 ಟಿಎಂಸಿ ನೀರು ಕೊಟ್ಟಿದ್ದಾರೆ. ಮಹದಾಯಿ ಬಗ್ಗೆ ಕೇಂದ್ರವರು ಹೊರಡಿಸಿರುವ ನೋಟಿಫಿಕೇಶನ್ ಬಗ್ಗೆ ತೃಪ್ತಿ ಇಲ್ಲ. ತಕ್ಷಣಕ್ಕೆ ಕುಡಿಯುವ ನೀರಿನ ಬಳಕೆಗೆ ಕೇಳಿದ್ದೇವೆ. ಕೋರ್ಟ್ನಲ್ಲಿ ಫೈನಲ್ ಆರ್ಡರ್ ಬರಬೇಕು. ಅಲ್ಲಿವರೆಗೆ ಮ್ಯಾನೇಜ್ ಮಾಡುತ್ತೇವೆ ಎಂದು ಹೇಳಿದರು.
ಕೆ.ಆರ್.ಪೇಟೆ ಶಾಸಕ, ಸಚಿವ ನಾರಾಯಣ್ ಗೌಡ ಮಹಾರಾಷ್ಟ್ರಕ್ಕೆ ಜೈ ಎಂದು ಹೇಳಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನನಗೆ ಈ ವಿಷಯದ ಬಗ್ಗೆ ಗೊತ್ತಿಲ್ಲ. ಅವರು ವೈಯಕ್ತಿಕವಾಗಿ ಮಾತನಾಡಿದ್ದಾರೆ. ಯಾವ ಸನ್ನಿವೇಶದಲ್ಲಿ ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ. ಆದ್ದರಿಂದ ನಾನು ಕಾಮೆಂಟ್ ಮಾಡಲ್ಲ ಎಂದರು.
ಬಜೆಟ್ ಅಧಿವೇಶನದಲ್ಲಿ ಯತ್ನಾಳ್ ಅವರು ದೊರೆಸ್ವಾಮಿ ವಿರುದ್ಧ ನೀಡಿರುವ ಹೇಳಿಕೆ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇವೆ. ಇಲ್ಲದಿದ್ದರೆ ಅಧಿವೇಶನ ಬಹಿಷ್ಕರಿಸುತ್ತೇವೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, ಅಧಿವೇಶನ ಚೆನ್ನಾಗಿ ನಡೆಯಲಿ ಎಂಬುದು ನಮ್ಮ ಉದ್ದೇಶ. ಕೆಲವು ಇಲಾಖೆಗಳ ಮೇಲೆ ಚರ್ಚೆ ನಡೆಯಬೇಕು. ಸಂಪೂರ್ಣ ಬಜೆಟ್ ಮಂಡನೆಯಾಗುತ್ತದೆ. ಅದನ್ನು ಬಿಟ್ಟು ಒಬ್ಬರ ಹೇಳಿಕೆಯನ್ನು ಸದನದ ಒಳಗೆ ತೆಗೆದುಕೊಂಡು ಹೋಗುವುದು ಸರಿಯಲ್ಲ ಎಂದು ಹೇಳಿದರು.