ಮೈಸೂರು: ಬೇಸಿಗೆಯ ಬಿಸಿಲಿನ ತಾಪಕ್ಕೆ ಕಪಿಲಾ ಸೇತುವೆ ನೀರು ತಳಮಟ್ಟಕ್ಕೆ ತಲುಪಿದ್ದು, ಮಳೆ ಬಾರದೇ ಇದ್ದರೆ ಮುಂದಿನ ದಿನಗಳಲ್ಲಿ ಸುತ್ತಮುತ್ತಲ ಗ್ರಾಮಗಳಲ್ಲಿ ನೀರಿನ ಹಾಹಾಕಾರ ಉಂಟಾಗಲಿದೆ.
ಹೌದು, ಈಗಾಗಲೇ ಬೇಸಿಗೆ ಕಾಲ ಆರಂಭವಾಗಿದ್ದು, ದಿನೆ ದಿನೇ ಕಪಿಲಾ ಸೇತುವೆಯ ನೀರಿನ ಮಟ್ಟ ತಳಮಟ್ಟಕ್ಕೆ ಹೋಗುತ್ತಿರುವುದು ನಂಜನಗೂಡು, ತಿ.ನರಸೀಪುರ ತಾಲೂಕಿನ 400 ಕ್ಕೂ ಹೆಚ್ಚು ಗ್ರಾಮಗಳಿಗೆ ನೀರಿನ ಆತಂಕ ಎದುರಾಗಿದೆ. ಕಳೆದ ವರ್ಷ ಭೀಕರ ಪ್ರವಾಹ ಬಂದಾಗ ನಾಲೆಗಳ ಮೂಲಕ ಕೆರೆ ಕಟ್ಟೆ ತುಂಬಿಸಿಕೊಳ್ಳಲು ಮುಂದಾಗದೇ, ಕಪಿಲಾ ಸೇತುವೆ ಮೂಲಕ ನೀರು ಸಮುದ್ರ ಪಾಲಾಗುವಂತೆ ಮಾಡಲಾಗಿದೆ. ಇದರಿಂದ ಬರಗಾಲ ಬಂದಾಗ ನೀರಿನ ಅಭಾವ ಎದುರಾಗುತ್ತದೆ. ಜಾನುವಾರು ಹಾಗೂ ಗ್ರಾಮಸ್ಥರಿಗೂ ಕುಡಿಯಲು ನೀರು ಇಲ್ಲದಂತಾಗುತ್ತದೆ. ಮುಂಗಾರು ಆರಂಭವಾಗಲು ಕೆಲವು ದಿನಗಳು ಬಾಕಿ ಇದ್ದು, ಉತ್ತಮ ಮಳೆಯಾದರೆ ಕಪಿಲಾ ಸೇತುವೆ ತುಂಬಿ ಹರಿಯುತ್ತದೆ. ಇಲ್ಲವಾದರೆ ಬರಗಾಲ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ.
ಕಬಿನಿ ಜಲಾಶಯ ತುಂಬಿ ಹರಿದಾಗ, ಎಚ್.ಡಿ.ಕೋಟೆ, ಸರಗೂರು, ನಂಜನಗೂಡು, ತಿ.ನರಸೀಪುರ, ಮೈಸೂರು ಸೇರಿದಂತೆ ವಿವಿಧ ಭಾಗಗಳಲ್ಲಿ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಆದರೆ, ಮುಂಗಾರು ಮಳೆ ಕೈ ಕೊಟ್ಟಾಗ ನೀರಿನ ಸಮಸ್ಯೆ ಹೇಳತೀರದಾಗಿದೆ. ನಂಜನಗೂಡು ತಾಲೂಕಿನಲ್ಲಿರುವ ಕಪಿಲಾ ಸೇತುವೆ ಕೆಳಗೆ ಕಬಿನಿ ನೀರು ಅರ್ಧಭಾಗವಾದರೂ ಹರಿಯಬೇಕು. ಆದರೆ, ನಾಲೆಗಳಿಗೆ ನೀರು ನಿಲ್ಲಿಸಿದ ಪರಿಣಾಮ ಸೇತುವೆ ತಳಭಾಗದ ಕಲ್ಲುಗಳ ಬರಗಾಲ ಬಂದಂತೆ ಗೋಚರಿಸುತ್ತಿದೆ. ಸುಂದರವಾಗಿ ಮೈದುಂಬಿ ಹರಿಯುವ ಕಪಿಲೆ ಬೇಸಿಗೆ ಬಂದರೆ ಬರಿದಾಗುತ್ತಿದ್ದಾಳೆ.
ಓದಿ : ಅಯೋಧ್ಯೆಗೂ ಮುನ್ನ ಸಿದ್ದರಾಮಯ್ಯರ ಊರಲ್ಲಿ ರಾಮಮಂದಿರ ನಿರ್ಮಾಣ.. ಇಲ್ಲೇ 'ಶ್ರೀರಾಮ'ನ ದರ್ಶನ