ನವದೆಹಲಿ: ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ದಲಿತರ ಬಗ್ಗೆ ನಿರ್ಲಕ್ಷ್ಯ ಮತ್ತು ತಿರಸ್ಕಾರದ ಭಾವನೆ ಹೊಂದಿವೆ ಎಂದು ಭಾನುವಾರ ಆರೋಪಿಸಿರುವ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ, ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ದಲಿತರು ಬಿಎಸ್ಪಿಗೆ ಮತ ಚಲಾಯಿಸುವಂತೆ ಕರೆ ನೀಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮತ ಚಲಾಯಿಸುವಾಗ ಮತದಾರರು ಈ ಐತಿಹಾಸಿಕ ನಿರ್ಲಕ್ಷ್ಯದ ಬಗ್ಗೆ ಜಾಗರೂಕರಾಗಿರಬೇಕು ಎಂದು ಅವರು ಮನವಿ ಮಾಡಿದರು.
"ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಈ ಸಮಯದಲ್ಲಿ ಕಾಂಗ್ರೆಸ್ ದಲಿತರನ್ನು ನಿರಂತರವಾಗಿ ನಿರ್ಲಕ್ಷಿಸುತ್ತಿರುವುದು ಮತ್ತು ತಿರಸ್ಕಾರ ಭಾವನೆಯಿಂದ ನೋಡುತ್ತಿರುವುದು ಆ ಪಕ್ಷದೊಳಗೆ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ತೋರಿಸುತ್ತದೆ. ಆ ಪಕ್ಷದ ನಿಲುವುಗಳು ಈಗ ಸರಿಯಾಗಿಲ್ಲ ಎಂದ ಮೇಲೆ ಭವಿಷ್ಯದಲ್ಲಿ ನಾವು ಅವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯ? ಹೀಗಾಗಿ ದಲಿತರು ಕಾಂಗ್ರೆಸ್ ಅಥವಾ ಬಿಜೆಪಿಗೆ ಮತ ನೀಡಿ ತಮ್ಮ ಮತವನ್ನು ವ್ಯರ್ಥ ಮಾಡಬಾರದು" ಎಂದು ಮಾಯಾವತಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾಂಗ್ರೆಸ್ ನಿರಂತರವಾಗಿ ಮೀಸಲಾತಿಯನ್ನು ವಿರೋಧಿಸುತ್ತಿದೆ ಎಂದು ಆರೋಪಿಸಿದ ಅವರು, "ದಲಿತರು ಬಿಎಸ್ಪಿಗೆ ಸಾಮೂಹಿಕವಾಗಿ ಮತ ಚಲಾಯಿಸಬೇಕು. ದಲಿತರ ಹಿತಾಸಕ್ತಿಗಳನ್ನು ರಕ್ಷಿಸಲು, ಅವರ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರ ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲು ನಿರಂತರವಾಗಿ ಹೋರಾಡುವ ಏಕೈಕ ಪಕ್ಷ ಬಿಎಸ್ಪಿ ಆಗಿದೆ" ಎಂದು ಪ್ರತಿಪಾದಿಸಿದರು.
ಕಾಂಗ್ರೆಸ್, ಬಿಜೆಪಿ ಅಥವಾ ಇತರ ಯಾವುದೇ ಮೈತ್ರಿಕೂಟಗಳ ಸುಳ್ಳು ಭರವಸೆಗಳಿಂದ ಪ್ರಭಾವಿತರಾಗದಂತೆ ಜಮ್ಮು ಮತ್ತು ಕಾಶ್ಮೀರದ ದಲಿತ ಸಮುದಾಯಕ್ಕೆ ಅವರು ಮನವಿ ಮಾಡಿದರು. ಆ ಪಕ್ಷಗಳ ದಲಿತ ವಿರೋಧಿ ಇತಿಹಾಸವನ್ನು ಗಮನದಲ್ಲಿಟ್ಟುಕೊಂಡು, ದಲಿತ ಮತದಾರರು ತಮ್ಮ ಅಮೂಲ್ಯವಾದ ಮತಗಳನ್ನು ಬಿಎಸ್ಪಿಗೆ ಮಾತ್ರ ಚಲಾಯಿಸಬೇಕು ಎಂದು ಅವರು ಹೇಳಿದರು.
ಅಕ್ಟೋಬರ್ 5ರಂದು ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್ಎಲ್ಡಿ)ದೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿದ್ದು, 90 ಸ್ಥಾನಗಳ ಪೈಕಿ 37 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪ್ರಸ್ತುತ, ಹರಿಯಾಣ ವಿಧಾನಸಭೆಯಲ್ಲಿ ಬಿಎಸ್ಪಿಯ ಯಾವುದೇ ಶಾಸಕರಿಲ್ಲ. ಐಎನ್ಎಲ್ಡಿಯ ಅಭಯ್ ಚೌಟಾಲಾ ಆ ಪಕ್ಷದ ಏಕೈಕ ಶಾಸಕರಾಗಿದ್ದಾರೆ.
ಈ ಹಿಂದೆ 2014ರಿಂದ 2019ರವರೆಗೆ ಹರಿಯಾಣ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದ ಚೌಟಾಲಾ, ಪ್ರಸ್ತುತ ವಿಧಾನಸಭೆಯಲ್ಲಿ ಐಎನ್ಎಲ್ಡಿಯ ಏಕೈಕ ಪ್ರತಿನಿಧಿಯಾಗಿ ಉಳಿದಿದ್ದಾರೆ.
ಎರಡೂ ಪಕ್ಷಗಳು 2024ರ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಿದ್ದವು. ಆದರೆ ಆ ಚುನಾವಣೆಯಲ್ಲಿ ಈ ಮೈತ್ರಿಕೂಟಕ್ಕೆ ಹೇಳಿಕೊಳ್ಳುವಂಥ ಯಶಸ್ಸು ಸಿಕ್ಕಿರಲಿಲ್ಲ. ಐಎನ್ಎಲ್ಡಿ ಶೇ 1.74ರಷ್ಟು ಮತಗಳನ್ನು ಪಡೆದರೆ, ಬಿಎಸ್ಪಿ ಶೇ 1.28ರಷ್ಟು ಮತಗಳನ್ನು ಗಳಿಸಿದೆ. ಐಎನ್ಎಲ್ಡಿ ಏಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಎಸ್ಪಿ ಒಂಬತ್ತು ಸ್ಥಾನಗಳಲ್ಲಿ ಸ್ಪರ್ಧಿಸಿತ್ತು.
ಇದನ್ನೂ ಓದಿ: ತಮಿಳುನಾಡಿನ ಉಪ ಮುಖ್ಯಮಂತ್ರಿಯಾಗಿ ಉದಯನಿಧಿ ಸ್ಟಾಲಿನ್ ನಾಳೆ ಪ್ರಮಾಣ ವಚನ ಸ್ವೀಕಾರ - Udhayanidhi Stalin