ನವದೆಹಲಿ: ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ರಾತ್ರಿ ಭಾರತ ತಂಡವನ್ನು ಪ್ರಕಟಿಸಿತು. 15 ಸದಸ್ಯರಿರುವ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಹಾರ್ದಿಕ್ ಪಾಂಡ್ಯ ಕೂಡ ತಂಡದಲ್ಲಿದ್ದಾರೆ. ಯುವ ವೇಗಿ ಮಯಾಂಕ್ ಯಾದವ್ ಸ್ಥಾನ ಪಡೆದಿರುವುದು ವಿಶೇಷ.
ಐಪಿಎಲ್ 2024ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಮಯಾಂಕ್ ಗಮನ ಸೆಳೆದಿದ್ದರು. ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಇವರು ಹೊಂದಿದ್ದಾರೆ. ಗಾಯದ ಸಮಸ್ಯೆಯಿಂದ ಐಪಿಎಲ್ ಮಧ್ಯದಲ್ಲೇ ಪಂದ್ಯಗಳಿಂದ ಹೊರಗುಳಿದಿದ್ದ ಯುವ ಬೌಲರ್, ಈಗ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ. ಉಳಿದಂತೆ, ಸಂಜು ಸ್ಯಾಮ್ಸನ್ ಮತ್ತು ಜಿತೇಶ್ ಶರ್ಮಾ ವಿಕೆಟ್ ಕೀಪರ್ ಆಗಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
NEWS 🚨 - #TeamIndia’s squad for T20I series against Bangladesh announced.
— BCCI (@BCCI) September 28, 2024
More details here - https://t.co/7OJdTgkU5q #INDvBAN @IDFCFIRSTBank pic.twitter.com/DOyz5XGMs5
ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಪೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಮತ್ತು ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಕೂಡ ತಂಡದಲ್ಲಿದ್ದಾರೆ. ಸಂಜು ಮತ್ತು ಅಭಿಷೇಕ್ ಆರಂಭಿಕರಾಗಿ ಬ್ಯಾಟಿಂಗ್ಗಿಳಿಯುವ ಸಾಧ್ಯತೆ ಇದೆ.
ಏತನ್ಮಧ್ಯೆ, ಸ್ಪಿನ್ನರ್ ವರುಣ್ ಚಕ್ರವರ್ತಿ ಮೂರು ವರ್ಷಗಳ ನಂತರ ಭಾರತ ಟಿ20 ತಂಡಕ್ಕೆ ಮರಳಿದ್ದಾರೆ. ಕೊನೆಯ ಬಾರಿಗೆ ಇವರು 2021ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಆಡಿದ್ದರು.
ಯಾರಿಗೆ ವಿಶ್ರಾಂತಿ?: ಸದ್ಯ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿ ಆಡುತ್ತಿರುವ ರಿಷಭ್ ಪಂತ್, ಶುಭಮನ್ ಗಿಲ್ ಹಾಗು ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ.
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿ.ಕೀ), ಜಿತೇಶ್ ಶರ್ಮಾ (ವಿ.ಕೀ), ರಿಂಕು ಸಿಂಗ್, ರಿಯಾನ್ ಪರಾಗ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ ಹರ್ಷಿತ್ ರಾಣಾ ಮತ್ತು ಮಯಾಂಕ್ ಯಾದವ್.
ಭಾರತ-ಬಾಂಗ್ಲಾದೇಶ ಟಿ20 ವೇಳಾಪಟ್ಟಿ:
- ಮೊದಲ ಟಿ20- ಗ್ವಾಲಿಯರ್- ಅಕ್ಟೋಬರ್ 6
- 2ನೇ ಟಿ20- ದೆಹಲಿ- ಅಕ್ಟೋಬರ್ 9
- 3ನೇ ಟಿ20- ಹೈದರಾಬಾದ್- ಅಕ್ಟೋಬರ್ 12
ಇದನ್ನೂ ಓದಿ: IPL ಆಟಗಾರರ ರಿಟೇನ್‌ಗೆ ಹೊಸ ನಿಯಮ: ತಂಡದಲ್ಲಿ ಎಷ್ಟು ಆಟಗಾರರನ್ನು ಉಳಿಸಿಕೊಳ್ಳಬಹುದು? - IPL Players Retention New Rule