ಮೈಸೂರು : ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಆದರೆ, ಪ್ರಧಾನಿ ಮೋದಿಯವರು ಬೆಲೆ ಏರಿಕೆ ನಿಯಂತ್ರಿಸದೇ ಬರೀ ಮಾತಾಡಿಕೊಂಡು ಹೋಗುತ್ತಿದ್ದಾರೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಹಾರ್ಡಿಂಗ್ ವೃತ್ತದ ಬಳಿ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ಜನ ಕೊರೊನಾದಿಂದ ತತ್ತರಿಸಿ ಹೋಗಿದ್ದಾರೆ. ಆದರೆ, ಪ್ರಧಾನಿ ಮೋದಿ ಜನರಿಗೆ ಅನುಕೂಲ ಮಾಡಿಕೊಡದೇ, ಬರೀ ಮಾತು, ಮಾತು ಇದರಲ್ಲಿ ಕಾಲ ಕಳೆಯುತ್ತಿದ್ದಾರೆ. ಬೆಲೆ ಏರಿಕೆ ವಿರುದ್ಧ ಜನ ದೇಶದಲ್ಲಿ ದಂಗೆ ಏಳಬೇಕು. ರಾಜಕಾರಣಿಗಳು ಮನೆಯಲ್ಲಿ ಕುಳಿತು ಹಬ್ಬ ಮಾಡುತ್ತಿದ್ದಾರೆ. ಆದರೆ, ಜನಸಾಮಾನ್ಯರು ಹಬ್ಬ ಮಾಡುತ್ತಿದ್ದಾರಾ? ಎಂದು ಪ್ರಶ್ನಿಸಿದರು.
ಹಲಾಲ್ ಮಾಂಸ ತಿನ್ನಬೇಡಿ ಎಂದು ಸರ್ಕಾರ ಆದೇಶ ಹೊರಡಿಸಿದ್ಯಾ? ಇಲ್ಲವಲ್ಲ. ಆದರೆ, ಕೆಲವು ಸಂಘಟನೆಗಳು ಸಮಾಜದಲ್ಲಿ ಶಾಂತಿ ಕದಡಲು ಪಿತೂರಿ ಮಾಡುತ್ತಿವೆ. ಇದರ ಬಗ್ಗೆ ಜನ ತಲೆಕೆಡಿಸಿಕೊಳ್ಳಬಾರದು. ಶಾಂತಿ ಹಾಗೂ ಸಹಬಾಳ್ವೆಯಿಂದ ಜೀವನ ಮಾಡಿಕೊಂಡು ಹೋಗಬೇಕು. ದ್ವೇಷಕ್ಕೆ ಒತ್ತು ಕೊಡಬಾರದು ಎಂದು ಮನವಿ ಮಾಡಿದರು.