ಮೈಸೂರು: ಕೊರೊನಾ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಕನ್ನಡ ಚಳವಳಿ ವಾಟಾಳ್ ಪಕ್ಷ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು, ರಾಜ್ಯಪಾಲರ ಆಳ್ವಿಕೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿದರು.
ನಗರದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಇರುವುದನ್ನೇ ಸರ್ಕಾರ ಮರೆತಿದೆ. ಪ್ರತಿನಿತ್ಯ 100 ರಿಂದ 150 ಜನ ಸಾಯುತ್ತಿದ್ದಾರೆ. ಸರ್ಕಾರ ನಾಟಕ ಮಾಡುವುದನ್ನು ಬಿಟ್ಟು ಜನರಿಗೆ ಅನುಕೂಲ ಮಾಡಿಕೊಡಲಿ ಎಂದು ಆಗ್ರಹಿಸಿದರು. ಕೊರೊನಾ ರೋಗಿಗಳಿಗಾಗಿ ಸರಿಯಾಗಿ ಹಾಸಿಗೆ ಇಲ್ಲ, ವೆಂಟಿಲೇಟರ್ ಇಲ್ಲ. ಕರ್ನಾಟಕ ಸಾವಿನ ಮನೆಯಾಗಿದೆ. ಕೊರೊನಾದಿಂದ ಮೃತಪಟ್ಟ ಪ್ರತಿಯೊಬ್ಬರಿಗೂ ಸರ್ಕಾರ 5 ಲಕ್ಷ ರೂ. ಪರಿಹಾರ ನೀಡಬೇಕು. ಹೆಸರಿಗೆ ಮಾತ್ರ ಸಚಿವರಿದ್ದಾರೆ. ಆದರೆ ಎಲ್ಲಿ ಹೋಗಿದ್ದಾರೆ ಅಂತ ಗೊತ್ತಿಲ್ಲವೆಂದು ಆಕ್ರೋಶ ಹೊರಹಾಕಿದರು.
ಡ್ರಗ್ಸ್ ಮಾಫಿಯಾದಲ್ಲಿ ರಾಜಕಾರಣಿ, ಶ್ರೀಮಂತರು ಹಾಗೂ ಅಧಿಕಾರಿಗಳ ಮಕ್ಕಳು ಭಾಗಿಯಾಗಿದ್ದರೂ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ಪೊಲೀಸರ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರಬಾರದು. ಮಾಫಿಯಾದಲ್ಲಿ ಇರುವವರ ಹೆಸರನ್ನು ಬಹಿರಂಗಗೊಳಿಸುವಂತೆ ಸಿಸಿಬಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವೆ ಎಂದರು. 15 ಕೋಟಿ ರೂ.ಖರ್ಚು ಮಾಡುವುದು ಸರಳ ದಸರಾವಲ್ಲ, ಎಂದಿನಂತೆ ವೈಭವಯುತವಾಗಿ ದಸರಾ ಆಚರಣೆ ಮಾಡಬೇಕು ಎಂದರು.