ಮೈಸೂರು : ಕೊರೊನಾ ಸೋಂಕು ಉಲ್ಬಣವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಶಾಲಾ-ಕಾಲೇಜುಗಳನ್ನ ಆರಂಭ ಮಾಡಬೇಡ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕಿಡಿಕಾರಿದರು.
ನಗರದ ಹಾರ್ಡಿಂಗ್ ವೃತ್ತದ ಬಳಿ ಪ್ರತಿಭಟನೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ಸಂಪೂರ್ಣವಾಗಿ ತೊಲಗುವವರೆಗೂ ಶಾಲೆ-ಕಾಲೇಜು ಮುಚ್ಚಿ. ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವಾಗ ಶಾಲೆ-ಕಾಲೇಜು ಆರಂಭ ಮಾಡುತ್ತಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಮೇಕೆದಾಟು ಹಾಗೂ ಮಹಾದಾಯಿ ಯೋಜನೆ ವಿಚಾರದಲ್ಲಿ ಆಡಳಿತಾರೂಢ ಬಿಜೆಪಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ನಾಟಕ ಮಾಡುತ್ತಿವೆ. ಪ್ರಾಮಾಣಿಕವಾಗಿ ಜನಹಿತ ಬಯಸುವ ಎಲ್ಲಾ ಪಕ್ಷದ ಜನಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟಕ್ಕಿಳಿಯಬೇಕು. ಜನರ ಹಿತಕಾಯಲು ಎಲ್ಲ ಪಕ್ಷಗಳು ಬದ್ದರಾಗಬೇಕು ಎಂದು ಆಗ್ರಹಿಸಿದರು.
ಮೇಕೆದಾಟು ಯೋಜನೆ ಬಗ್ಗೆ ಎಲ್ಲಾ ಪಕ್ಷಗಳು ರಾಜಕೀಯ ಮಾಡುತ್ತಿವೆ. ಕಾಂಗ್ರೆಸ್ ಪಕ್ಷದವರು ಪಾದಯಾತ್ರೆ ಹೆಸರಲ್ಲಿ ಹೊಸ ನಾಟಕ ಆರಂಭಿಸಿದರು. ಬಿಜೆಪಿಯವರು ಅದನ್ನು ತಡೆಯುವ ನಾಟಕ ಮಾಡಿದರು. ಜೆಡಿಎಸ್ ತನ್ನದೊಂದು ಇರಲಿ ಎಂದು ಜಲಯಾತ್ರೆ ನಡೆಸುವ ನಾಟಕ ಆರಂಭಿಸಿದರು.
ಆರು ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಏನೂ ಮಾಡಲಿಲ್ಲ. ಈಗ ಪಾದಯಾತ್ರೆ ನಡೆಸುತ್ತಿರುವುದು ಸರಿಯಲ್ಲ. ಪಾದಯಾತ್ರೆ ಹೆಸರಲ್ಲಿ ಮಹಾತ್ಮ ಗಾಂಧಿಗೆ ಅಪಮಾನ ಮಾಡಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೇಕೆದಾಟು ಬಗ್ಗೆ ಸಿಎಂ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಈ ವಿಚಾರದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಆಗುತ್ತಿದ್ದರೂ, ಸಂಸದರು ಏನು ಮಾಡುತ್ತಿದ್ದಾರೆ?. ಅವರೆಲ್ಲ ದನ ಕಾಯಲು ಹೋಗಲಿ. ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ, ಯಾಕೆ ದ್ವನಿ ಎತ್ತುತ್ತಿಲ್ಲವೆಂದು ಕಿಡಿಕಾರಿದರು.
ಮಹಾದಾಯಿ ಉತ್ತರ ಕರ್ನಾಟಕದ ಕಣ್ಣು. ಮಹಾದಾಯಿ ಯೋಜನೆಗಾಗಿ ಕಾಂಗ್ರೆಸ್ ಹೋರಾಟ ಮಾಡಬೇಕು. ಇವೆರಡು ಯೋಜನೆಗಳ ಬಗ್ಗೆ ಮೂರು ಪಕ್ಷಗಳು ಗಂಭೀರವಾಗಿ ಯೋಚಿಸಬೇಕು. ರಾಜ್ಯದ ಎಲ್ಲಾ ಪಕ್ಷದ ಜನಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟ ನಡೆಸಿದರೆ, ಅದಕ್ಕೆ ಶಕ್ತಿ ಮತ್ತು ಗೌರವ ಬರಲಿದೆ ಎಂದು ಆಗ್ರಹಿಸಿದರು.
ಬೆಳಗಾವಿ ಗಡಿ ಪ್ರದೇಶದಲ್ಲಿ ಪುಂಡಾಟಿಕೆ ಮೆರೆದು ಕನ್ನಡಿಗರಿಗೆ ಕಿರುಕುಳ ನೀಡುತ್ತಿರುವ ಎಂಇಎಸ್ ಅನ್ನು ನಿಷೇಧಿಸಬೇಕು. ಕನ್ನಡಿಗರಿಗೆ ಅನ್ಯಾಯವಾಗದಂತೆ ನಿಗಾವಹಿಸಬೇಕು ಎಂದು ಒತ್ತಾಯಿಸಿದರು.
ಓದಿ: ಶೃಂಗೇರಿಯ ಶಾರದಾ ಪೀಠದಲ್ಲಿ 14 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ - ವಿಡಿಯೋ