ಬೆಂಗಳೂರು: ಗಣರಾಜ್ಯೋತ್ಸವದ ಸಂದರ್ಭದಲ್ಲಿ ಬೆಂಗಳೂರಿನ ವಿವಿಧೆಡೆ ಬಾಂಬ್ ಸ್ಫೋಟಿಸಲು ಸಂಚು ರೂಪಿಸಲಾಗಿದೆ ಎಂದು ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದ ಆರೋಪಿಯನ್ನ ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮನ್ಸೂರ್ ಬಂಧಿತ ಆರೋಪಿ.
ಜನವರಿ 9ರಂದು ಸಂಜೆ ಬೆಂಗಳೂರು ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದ ಮನ್ಸೂರ್ ತನ್ನನ್ನ ರಿಯಾಜ್ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡು, ''ರಾಮೇಶ್ವರಂ ಕೆಫೆಯಲ್ಲಿ ಸ್ಪೋಟಿಸಿದಂತೆ ಬೆಂಗಳೂರಿನ ವಿವಿಧೆಡೆ ಗಣರಾಜ್ಯೋತ್ಸವ ದಿನ ಸ್ಫೋಟಿಸಲು ಮೂವರು ಸಂಚು ರೂಪಿಸಿದ್ದಾರೆ ಎಂದು ಆರು ಜನರ ಹೆಸರು ಮತ್ತು ವಿಳಾಸ ತಿಳಿಸಿದ್ದ. ಈ ಮಾಹಿತಿಯನ್ನ ಕಡೆಗಣಿಸದೆ ಪೊಲೀಸರು ಪರಿಶೀಲಿಸಿದಾಗ, ಅದೊಂದು ಹುಸಿ ಕರೆ ಎಂದು ತಿಳಿದು ಬಂದಿತ್ತು. ಬಳಿಕ ಕರೆ ಮಾಡಿದ್ದ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆತ ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ನೀಡಿರುವುದು ಬಯಲಾಗಿದೆ.
ವ್ಯಾಪಾರದಲ್ಲಿನ ಪ್ರತಿಸ್ಪರ್ಧಿಗಳನ್ನು ಸಿಕ್ಕಿಸಲು ಸಂಚು: ಆರೋಪಿ ಮನ್ಸೂರ್ ಈ ಮೊದಲು ಕೆ.ಆರ್.ಮಾರ್ಕೆಟ್ ಬಳಿ ನಡೆಸುತ್ತಿದ್ದ ಪ್ರಾವಿಜನ್ ಸ್ಟೋರ್ ನಷ್ಟವುಂಟಾಗಿ ಮುಚ್ಚಲ್ಪಟ್ಟಿತ್ತು. ಬಳಿಕ ಮನ್ಸೂರ್ ಹೊಸದಾಗಿ ಗುಜರಿ ವ್ಯಾಪಾರ ಆರಂಭಿಸಿದ್ದ. ಆದರೆ ಆ ವ್ಯಾಪಾರವೂ ಕೈಹಿಡಿದರಲಿಲ್ಲ. ಇದರಿಂದ ಸಿಟ್ಟಿಗೆದ್ದ ಮನ್ಸೂರ್ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ಬಾಂಬ್ ಸ್ಪೋಟದ ಕಥೆ ಹೇಳಿದ್ದ. ಜೊತೆಗೆ ಸ್ಫೋಟಿಸಲು ಸಂಚು ರೂಪಿಸಿರುವ ಆರೋಪಿಗಳು ಇವರೇ ಎಂದು ತನ್ನ ವ್ಯಾಪಾರಕ್ಕೆ ಪ್ರತಿಸ್ಪರ್ಧಿಗಳಾಗಿದ್ದವರ ಹೆಸರು ಹಾಗೂ ವಿಳಾಸಗಳನ್ನ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಕಂಟ್ರೋಲ್ ರೂಮ್ ಪಿಎಸ್ಐ ಓರ್ವರು ನೀಡಿರುವ ದೂರಿನನ್ವಯ ವಿಧಾನಸೌಧ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಇದನ್ನೂ ಓದಿ: ಬೆಂಗಳೂರಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಆರೋಪಿ ಬಂಧನ - COWS UDDERS CUT CASE