ಮೈಸೂರು : ಕಾರಣ ಇಲ್ಲದೇ ಗಡಿ ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮಾನಸಿಕವಾಗಿ ಅಸ್ವಸ್ಥರಾಗಿದ್ದರೆ ಮೊದಲು ಮೆಂಟಲ್ ಆಸ್ಪತ್ರೆಯಲ್ಲಿ ಚೆಕ್ ಮಾಡಿಸಿಕೊಳ್ಳಲಿ ಎಂದು ಸಚಿವ ಬಿ ಸಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸಿಎಂ ಸುಮ್ಮನೆ ಕ್ಯಾತೆ ತೆಗೆಯುತ್ತಿದ್ದಾರೆ. ಈಗ ಗಡಿ ವಿಚಾರ ಅವಶ್ಯಕತೆ ಇರಲಿಲ್ಲ. ರಾಜಕೀಯ ತೆವಲಿಗೆ ಹೀಗೆ ಅಲ್ಲಿನ ಸಿಎಂ ಮಾತನಾಡುತ್ತಿದ್ದಾರೆ.
ನಮಗೆ ಮಹಾಜನ ವರದಿಯೇ ಫೈನಲ್, ಕರ್ನಾಟಕದ ಸೂಜಿ ಗಾತ್ರದ ಭೂಮಿಯನ್ನು ಮಹಾರಾಷ್ಟ್ರಕ್ಕೆ ನೀಡುವುದಿಲ್ಲ. ಅಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ರೀತಿಯ ಹುಳಿ ಹಿಂಡುತ್ತಿದ್ದಾರೆ ಎಂದರು.
ವೀಕ್ ಮೈಂಡ್ ರೈತರ ಆತ್ಮಹತ್ಯೆಗೆ ಕಾರಣ : ರೈತರ ಆತ್ಮಹತ್ಯೆಗೆ ಅವರ ವೀಕ್ನೆಸ್ ಮೈಂಡ್ ಕಾರಣ. ಅವರ ಆತ್ಮಹತ್ಯೆಗೆ ಸರ್ಕಾರದ ನೀತಿ ಕಾರಣವಲ್ಲ. ಯಾವುದೋ ಒಂದು ಸಂದರ್ಭದಲ್ಲಿ ರೈತರು ತಮ್ಮ ಮನಸ್ಸಿನ ಮೇಲಿನ ನಿಯಂತ್ರಣ ತಪ್ಪಿ ಆತ್ಮಹತ್ಯೆಯ ನಿರ್ಧಾರಕ್ಕೆ ಬರುತ್ತಾರೆ. ಇದನ್ನ ತಡೆಯುವ ಉದ್ದೇಶದಿಂದಲೇ ಸರ್ಕಾರ ಅನುಕೂಲಕರವಾದ ಕಾರ್ಯಕ್ರಮಗಳನ್ನ ಮಾಡುತ್ತಿದೆ ಎಂದರು.
ಓದಿ: ಗಡಿ ವಿಚಾರದಲ್ಲಿ ಮಹಾಜನ್ ವರದಿ ಅಂತಿಮ, ಉದ್ಧವ್ ಹೇಳಿಕೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧ.. ಸಿಎಂ ಬಿಎಸ್ವೈ
ರಾಜ್ಯದಲ್ಲಿ ಗಣರಾಜ್ಯೋತ್ಸವದ ದಿನ ರೈತರು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್ ರ್ಯಾಲಿಗೆ ಅನುಮತಿ ನೀಡುವುದು ಸಿಎಂ ಹಾಗೂ ಗೃಹ ಸಚಿವರಿಗೆ ಬಿಟ್ಟ ವಿಚಾರ ಎಂದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದ ನೂತನ 3 ಕಾಯ್ದೆಗಳು ರೈತರ ಪರವಾಗಿವೆ ಎಂದರು.