ಮೈಸೂರು: ಕಬ್ಬಿನ ಗದ್ದೆಯೊಂದರಲ್ಲಿ ಎರಡು ಚಿರತೆ ಮರಿಗಳು ಪತ್ತೆಯಾಗಿರುವ ಘಟನೆ ಟಿ ನರಸೀಪುರ ತಾಲೂಕಿನ ಕೋಣಗಹಳ್ಳಿ ಗ್ರಾಮದಲ್ಲಿ ನಡೆದಿದೆ. ಮರಿಗಳನ್ನು ತಾಯಿ ಚಿರತೆಯೊಂದಿಗೆ ಸೇರಿಸಲು ಅರಣ್ಯ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಕೋಣಗಹಳ್ಳಿ ರೈತರೊಬ್ಬರ ಕಬ್ಬಿನ ಗದ್ದೆಯಲ್ಲಿ ಎರಡು ಚಿರತೆ ಮರಿಗಳು ಕಂಡುಬಂದಿವೆ, ಕೊಡಲೇ ರೈತ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಿಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ತಾಯಿ ಮಡಿಲಿಗೆ ಚಿರತೆ ಮರಿಗಳನ್ನು ಸೇರಿಸಲು ಪ್ರಯತ್ನ ಆರಂಭಿಸಿದ್ದಾರೆ. ಈ ಹಿನ್ನೆಲೆ ತಾಯಿ ಚಿರತೆಯ ಸೆರೆಗೆ ಮರಿಗಳು ಇದ್ದ ಕಡೆ ಬೋನು ಇರಿಸಿದ್ದಾರೆ.
ತಾಯಿ ಚಿರತೆಯನ್ನು ಸೆರೆ ಹಿಡಿದು ಮರಿಗಳನ್ನು ಅದರ ಬಳಿ ಸೇರಿಸಲು ಕಾರ್ಯಾಚರಣೆ ನಡೆಸಿದ್ದೇವೆ. ಇದು ಸೂಕ್ಷ್ಮ ವಿಚಾರ ಆಗಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಡಿಸಿಎಫ್ ಬಸವರಾಜ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಮನೆ ಸಮೀಪವೇ ಮರಿ ಹಾಕಿದ ಚಿರತೆ: ಮರಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಚಾಮರಾಜನಗರ ರೈತರು
ಚಿರತೆ ಮರಿಗಳನ್ನು ತಾಯಿ ಮಡಿಲಿಗೆ ಸೇರಿಸಿದ್ದ ಅರಣ್ಯ ಇಲಾಖೆ: ಇತ್ತೀಚಿಗೆ, ಮೈಸೂರು ತಾಲೂಕಿನ ಆಯರಹಳ್ಳಿ ಗ್ರಾಮದ ಜಮೀನಿನಲ್ಲಿ ಕರಿ ಚಿರತೆ ಮರಿ ಸೇರಿ ಮೂರು ಮರಿಗಳು ಪತ್ತೆಯಾಗಿದ್ದವು. ಗ್ರಾಮದ ರೈತ ದ್ಯಾವಣ್ಣ ನಾಯಕ ಅವರು ಕಬ್ಬನ್ನು ಕಡಿಯುವಾಗ ಚಿರತೆ ಮರಿಗಳು ಕಾಣಿಸಿಕೊಂಡಿದ್ದವು. ತಕ್ಷಣ ಅವುಗಳ ರಕ್ಷಣೆ ಮಾಡಿದ ದ್ಯಾವಣ್ಣ ನಾಯಕ ಅರಣ್ಯ ಇಲಾಖೆಗೆ ಒಪ್ಪಿಸಿದ್ದರು. ಕಬ್ಬಿನ ಗದ್ದೆಯಲ್ಲಿ ಸಿಕ್ಕ ಮೂರು ಚಿರತೆ ಮರಿಗಳನ್ನು ಅರಣ್ಯ ಇಲಾಖೆ 10 ದಿನಗಳ ಯಶಸ್ವಿ ಕಾರ್ಯಾಚರಣೆಯ ನಂತರ ಮರಳಿ ತಾಯಿಯ ಮಡಿಲಿಗೆ ಸೇರಿಸಿತ್ತು.
ಮೂರು ಚಿರತೆ ಮರಿಗಳನ್ನು ವಶಕ್ಕೆ ಪಡೆದಿದ್ದ ಅದೇ ಸ್ಥಳದಲ್ಲಿ ಪ್ರತ್ಯೇಕವಾದ ಪೆಟ್ಟಿಗೆಯಲ್ಲಿ ಆ ಮರಿಗಳನ್ನು ಇರಿಸಿ, ತಾಯಿ ಚಿರತೆ ಬಂದು ಮರಿಗಳನ್ನು ತೆಗೆದುಕೊಂಡು ಹೋಗುವಂತೆ ಮಾಡಲಾಗಿತ್ತು. ಸ್ಥಳದಲ್ಲಿ ಕ್ಯಾಮರಾ ಸಹ ಅಳವಡಿಸಲಾಗಿತ್ತು. ಆದರೆ ತಾಯಿ ಚಿರತೆ ಬಾರದ ಕಾರಣದಿಂದ ಎರಡನೇ ದಿನದಂದು ಸಂಜೆ 5 ಗಂಟೆಯ ವೇಳೆಗೆ ಮರಿಗಳು ದೊರೆತ ಸ್ಥಳದಲ್ಲಿ ಟ್ರಾಪ್ ಕೇಜ್ ಅಳವಡಿಸಲಾಗಿತ್ತು. ಸರಿಸುಮಾರು 6 ಗಂಟೆ ವೇಳೆಗೆ ತಾಯಿ ಚಿರತೆ ಬೋನಿಗೆ ಬಿದ್ದಾಗ ಮೇಲಧಿಕಾರಿಗಳ ಸೂಚನೆಯಂತೆ ತಾಯಿ ಮತ್ತು ಮರಿ ಚಿರತೆಗಳನ್ನು ಚಾಮುಂಡಿ ಪುನರ್ವಸತಿ ಕೇಂದ್ರಕ್ಕೆ ಸಾಗಿಸಲಾಗಿತ್ತು. ಕೂಡಲೇ ನುರಿತ ವೈದ್ಯರ ತಂಡ ಮರಿ ಮತ್ತು ತಾಯಿ ಚಿರತೆಗಳನ್ನು ಬೇರ್ಪಡಿಸಿ, ಸಿಸಿಟಿವಿ ಅಳವಡಿಸಿ ನಿಗಾ ವಹಿಸಲಾಗಿತ್ತು.
ಒಂಬತ್ತನೇ ದಿನ ತಾಯಿ ಚಿರತೆ ಬಂದು ಕಪ್ಪು ಚಿರತೆ ಮರಿ ಸೇರಿದಂತೆ 2 ಮರಿಗಳನ್ನು ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗಿತ್ತು. ಕೊನೆಗೆ ಹತ್ತನೇ ದಿನ ಉಳಿದ ಒಂದು ಮರಿಯನ್ನು ತಾಯಿ ಚಿರತೆ ಬಂದು ತೆಗೆದುಕೊಂಡು ಹೋಗಿದ್ದು, ಈ ಮೂಲಕ ಮೈಸೂರು ಪ್ರಾದೇಶಿಕ ವಿಭಾಗ ಮತ್ತು ಮೈಸೂರು ಮೃಗಾಲಯ ಹಾಗೂ ವನ್ಯಜೀವಿ ವಿಭಾಗದಿಂದ ಜಂಟಿಯಾಗಿ ಮಾಡಿದ ಈ ಕಾರ್ಯಾಚರಣೆ ಯಶಸ್ವಿಯಾಗಿತ್ತು.