ಮೈಸೂರು : ಅಕ್ರಮವಾಗಿ ಜಿಂಕೆ ಬೇಟೆಯಾಡಿ ಅದರ ಮಾಂಸ ಹೊತ್ತು ತರುತ್ತಿದ್ದ ಇಬ್ಬರು ಆರೋಪಿಗಳನ್ನು ಆನೆಚೌಕೂರು ವನ್ಯಜೀವಿ ವಲಯದ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಆದರೆ, ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಆನೆಚೌಕೂರು ಕೇಂಬುಕೊಲ್ಲಿಯ ಆನೆ ಕಂದಕದ ಬಂಡೆಯ ಬಳಿ 4 ಮಂದಿ ಆರೋಪಿಗಳು ಜಿಂಕೆ ಬೇಟೆಯಾಡಿ, ಅದರ ಮಾಂಸ ಹೊತ್ತು ತರುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದು ಎನ್ ಬಿ ಮನು ಮತ್ತು ಮಂಜು ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ದಾಳಿಯ ಸಂದರ್ಭದಲ್ಲಿ ಪೂವಯ್ಯ ಮತ್ತು ರಾಜು ಎಂಬ ಆರೋಪಿಗಳು ಪರಾರಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ 20 ಕೆಜಿ ಜಿಂಕೆ ಮಾಂಸ, ಜಿಂಕೆ ಚರ್ಮ, 1 ಜೋಡಿ ನಳಿಕೆಯ ಬಂದೂಕು, ಕತ್ತಿ, ಹಗ್ಗ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಕ್ರಮ ಬೇಟೆ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಉಳಿದ ಇಬ್ಬರು ಆರೋಪಿಗಳ ಪತ್ತೆಗಾಗಿ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದಾರೆ.