ಮೈಸೂರು : ರೋಹಿಣಿ ಸಿಂಧೂರಿ ವರ್ಗಾವಣೆ ಬಗ್ಗೆ ಟ್ವಿಟರ್‌ನಲ್ಲಿ ಸಿದ್ದರಾಮಯ್ಯ ಟ್ವೀಟ್ಗೆ ಸಂಸದ ಪ್ರತಾಪ್‌ಸಿಂಹ ತಿರುಗೇಟು ನೀಡಿದ್ದಾರೆ. ಟ್ವಿಟರ್‌ನಲ್ಲಿ ಮೈಸೂರಿನ ಐಎಎಸ್ ಅಧಿಕಾರಿಗಳ ನಡುವಿನ ಕಿತ್ತಾಟಕ್ಕೆ ಬಿಜೆಪಿ ಚುನಾಯಿತ ಪ್ರತಿನಿಧಿಗಳು ಹಾಗೂ ಜೆಡಿಎಸ್ನ ಸಾ ರಾ ಮಹೇಶ್ ಕಾರಣ.
ಇವರು ಮೊದಲು ರೋಹಿಣಿ ಸಿಂಧೂರಿಯನ್ನು ಬೆಂಬಲಿಸಿದ್ದ ಪ್ರತಾಪ್ ಸಿಂಹ ನಂತರ ಶಿಲ್ಪಾನಾಗ್ ಅವರನ್ನು ಬೆಂಬಲಿಸಿದರು. ಒಟ್ಟಿಗೆ ಇಬ್ಬರ ವರ್ಗಾವಣೆಗೆ ಕಾರಣರಾದರು ಎಂಬ ಸಿದ್ದರಾಮಯ್ಯ ಟ್ವೀಟ್ಗೆ ತೆಲುಗು ಶೈಲಿಯಲ್ಲಿ ಪ್ರತಾಪ್ ಸಿಂಹ ಉತ್ತರಿಸಿದ್ದಾರೆ.
ಸಿದ್ದರಾಮಯ್ಯ ಗಾರು ನೀವು ಮುಖ್ಯಮಂತ್ರಿ ಆಗಿದ್ದಾಗ ನಿಮ್ಮ ಶಿಷ್ಯ ಮರಿಗೌಡ ಅಂದಿನ ಡಿಸಿ ಶಿಖಾ ಅವರನ್ನು ಅವಾಚ್ಯ ಶಬ್ದಗಳಿಂದ ಸಾರ್ವಜನಿಕವಾಗಿ ನಿಂದಿಸಿದಾಗ, ಶಿಷ್ಯನಿಗೆ ಬುದ್ದಿ ಹೇಳುವುದನ್ನು ಬಿಟ್ಟು ನೀವು ಶಿಖಾ ಅವರನ್ನೇ ಎತ್ತಂಗಡಿ ಮಾಡಿಸಿದ್ದು ಮರೆತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಇದರ ಜೊತೆಗೆ ಕಾಂಗ್ರೆಸ್ನ ಮೈಸೂರಿನ ಶಾಸಕರು ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನಗೊಂಡ ಬಗ್ಗೆ ಪತ್ರಿಕೆಯಲ್ಲಿ ಬಂದ ವರದಿಯನ್ನು ಟ್ವಿಟರ್‌ನಲ್ಲಿ ಟ್ಯಾಗ್ ಮಾಡಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಸಂಸದ ಮತ್ತು ಶಾಸಕ ಟ್ವಿಟರ್‌ನಲ್ಲಿ ಜಟಾಪಟಿ
ಐಎಎಸ್ ಅಧಿಕಾರಿಗಳ ಜಟಾಪಟಿಗೆ ಬಿಜೆಪಿ ಸಂಸದ, ಶಾಸಕರು ಕಾರಣ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ ಹಿನ್ನೆಲೆ ಸಂಸದ ಪ್ರತಾಪಸಿಂಹ ಹಾಗೂ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಜಟಾಪಟಿ ನಡೆಸಿದ್ದಾರೆ.
ಹಿಂದಿನ ಡಿಸಿ ಶಿಖಾರನ್ನ ನಿಮ್ಮ ಶಿಷ್ಯ ಮರಿಗೌಡ ಸಾರ್ವಜನಿಕವಾಗಿ ನಿಂದಿಸಿದಾಗ ಬುದ್ದಿ ಹೇಳುವುದನ್ನ ಬಿಟ್ಟು ಶಿಖಾರನ್ನ ಎತ್ತಂಗಡಿ ಮಾಡಿಸಿದ್ದು ಮರೆತು ಹೋಯಿತೇ ಎಂದು ಸಂಸದ ಪ್ರತಾಪ್‌ಸಿಂಹ ಟ್ವಿಟರ್‌ನಲ್ಲಿ ತಿರುಗೇಟು ನೀಡಿದರು.
ಪ್ರತಾಪ್‌ಸಿಂಹ ಆರೋಪಕ್ಕೆ ಯತೀಂದ್ರ ಸಿದ್ದರಾಮಯ್ಯ ಟ್ವೀಟ್ ಮಾಡಿ, ಶಿಖಾ ಅವರು ಡಿಸಿಯಾಗಿ ಮೂರು ವರ್ಷಗಳ ಅವಧಿ ಪೂರೈಸಿ ನಂತರ ವರ್ಗಾವಣೆಗೊಂಡಿದ್ದರು.
ಈಗಿನ ಹಾಗೆ 8 ತಿಂಗಳಿಗೇ ಎತ್ತಂಗಡಿಯಾಗಿರಲಿಲ್ಲ. ಕೊರೊನಾ ಸಂಕಷ್ಟದಲ್ಲೂ ನೀವು ಹಾಗೂ ಡಿಸಿ ಮಾಧ್ಯಮಗಳಲ್ಲಿ ಬಡಿದಾಡಿಕೊಂಡಿದ್ದು ಹಾಗೂ ಉನ್ನತ ಅಧಿಕಾರಿಗಳು ಬೀದಿರಂಪ ಮಾಡಿಕೊಂಡಿದ್ದು, ಆಡಳಿತಯಂತ್ರದ ಮೇಲಿನ ನಿಮ್ಮ ಹಿಡಿತ ತಪ್ಪಿದ್ದನ್ನು ತೋರುತ್ತದೆ ಎಂದರು.
ನಿಮ್ಮದೇ ಪಕ್ಷ ಆಡಳಿತದಲ್ಲಿದ್ದರೂ ಮಾಧ್ಯಮಗಳ ಮುಂದೆ ಅಧಿಕಾರಿಯ ಮೇಲೆ ದೂರು ಕೊಡಬೇಕಾಯಿತೇ ಹೊರತು, ನಿಮ್ಮಿಂದ ಜಿಲ್ಲಾಡಳಿತವನ್ನು ಸರಿಯಾಗಿ ನಿಯಂತ್ರಿಸಲಾಗಲಿಲ್ಲ. ಇದಕ್ಕಿಂತ ಈ ಸರ್ಕಾರದ ಅಧಕ್ಷತೆಗೆ ಕನ್ನಡಿ ಬೇಕೆ?. ಮೊದಲು ಆಡಳಿತ ಬಿಗಿ ಮಾಡಿ ನಂತರ ವಿಪಕ್ಷದವರ ಬಗ್ಗೆ ಮಾತನಾಡಿ ಎಂದು ಟ್ವೀಟ್ ಮಾಡಿದ್ದಾರೆ.