ಮೈಸೂರು: ಬೋನಿಗೆ ಬಿದ್ದ ಹುಲಿಯನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಚಿಕಿತ್ಸೆಗಾಗಿ ಕಳುಹಿಸಲಾಗಿದ್ದು , ಗಾಯಗೊಂಡ ಹುಲಿ ಬೋನಿನಲ್ಲೂ ಆರ್ಭಟಿಸುತ್ತಿತ್ತು.
ಈ ಹುಲಿಯು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ನೇರಳಕುಪ್ಪೆ ಬಿ ಹಾಡಿಯ, ಆದಿವಾಸಿ ಜಗದೀಶ್ ಎಂಬುವವರನ್ನು ಕೊಂದು ಹಾಕಿತ್ತು. 24 ಗಂಟೆಯೊಳಗೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಹುಲಿಯು ಬಿದ್ದಿದ್ದು, ಇದಕ್ಕೆ ಸುಮಾರು 12 ವರ್ಷ ವಯಸ್ಸಾಗಿದೆ.
ಕಾಡಿನೊಳಗೆ 2 ಹುಲಿಗಳ ನಡುವೆ ಕಾದಾಟ ನಡೆದಿದ್ದು , ಈ ವೇಳೆ ಸೆರೆ ಸಿಕ್ಕ ಹುಲಿಗೆ ಕಾಲು, ಮುಖ ಹಾಗೂ ಬೆನ್ನಿನಲ್ಲಿ ಗಾಯವಾಗಿದೆ. ಇದರಿಂದ ಕಾಡಿನಲ್ಲಿ ಭೇಟೆಯಾಡಲು ಸಾಧ್ಯವಾಗದೆ ಮನುಷ್ಯನನ್ನು ಭೇಟೆಯಾಡಿದೆ ಎಂದು ಡಿಸಿಎಫ್ ಮಹೇಶ್ ಕುಮಾರ್ ತಿಳಿಸಿದ್ದಾರೆ.
ಜೊತೆಗೆ ಈ ಹುಲಿಗೆ ವಯಸ್ಸಾಗಿರುವ ಕಾರಣ, ಅದರ ಹಲ್ಲುಗಳು ಸಂಪೂರ್ಣ ಸವೆದು ಹೋಗಿವೆ. ಆದ್ದರಿಂದ ಮನುಷ್ಯನ ಮೇಲೆ ದಾಳಿ ಮಾಡಿರುವ ಸಾಧ್ಯತೆಯಿದೆ ಎಂದು ಅರಣ್ಯ ಇಲಾಖೆಯ ವೈದ್ಯರು ತಿಳಿಸಿದ್ದಾರೆ.
ಸೆರೆ ಸಿಕ್ಕ ಹುಲಿಯನ್ನು ಮೈಸೂರು ಮೃಗಾಲಯದಲ್ಲಿ ಸ್ಥಳದ ಅಭಾವ ಇರುವುದರಿಂದ, ಚಿಕಿತ್ಸೆಗಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಕಳುಹಿಸಿಕೊಡಲಾಗಿದೆ.