ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ಜಂಬೂಸವಾರಿ ಮೆರವಣಿಗೆ ಮುಗಿಸಿದ ಅಭಿಮನ್ಯು ನೇತೃತ್ವದ ಗಜಪಡೆಗೆ ಅರಣ್ಯ ಇಲಾಖೆ, ಜಿಲ್ಲಾಡಳಿತ ಹಾಗೂ ಅರಮನೆ ಆಡಳಿತ ಮಂಡಳಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೀಳ್ಕೊಟ್ಟರು.
ಇಂದು ಅರಮನೆ ಆವರಣದ ಮುಂಭಾಗದಲ್ಲಿ ದಸರಾದ ಅಭಿಮನ್ಯು ನೇತೃತ್ವದ 12 ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಎಲ್ಲ ಆನೆಗಳಿಗೂ ಹೂವಿನ ಅಲಂಕಾರ ಮಾಡಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಿಸಿಎಫ್ ಕರಿಕಾಳನ್ ಮಾತನಾಡಿ, ದಸರಾ ಸುಸಜ್ಜಿತವಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿ, ನಾನು 6ನೇ ಬಾರಿ ದಸರಾ ಮಾಡುತ್ತಿದ್ದೇನೆ. ಆದರೆ, ಈ ಬಾರಿಯ ದಾಖಲೆಯ ಜನ ದಸರಾದಲ್ಲಿ ಭಾಗವಹಿಸಿದ್ದಾರೆ. ಅದರ ನಡುವೆ ಅಭಿಮನ್ಯು ಜಂಬೂಸವಾರಿ ಹೊತ್ತು ರಾಜ ಗಾಂಭೀರ್ಯದಿಂದ ನಡೆದಿದ್ದು, ನಮಗೆಲ್ಲ ಖುಷಿ ತಂದಿದೆ ಎಂದರು.
ಬೆಳಗಿನ ಜಾವವೇ ತಾಯಿ-ಮಗ ಶಿಬಿರಕ್ಕೆ ಶಿಫ್ಟ್: ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಆಗಮಿಸಿದ ರಾಂಪುರ ಶಿಬಿರದ ಆನೆ ಲಕ್ಷ್ಮೀ ಮೈಸೂರಿನ ಅರಮನೆಗೆ ಬಂದಾಗ ಗಂಡು ಮರಿಗೆ ಜನ್ಮ ನೀಡಿದ್ದು, ಆ ಮರಿಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಸೂಚನೆ ಮೇರೆಗೆ ಶ್ರೀದತ್ತಾತ್ರೇಯ ಎಂದು ನಾಮಕರಣ ಮಾಡಲಾಗಿತ್ತು.
ಈ ತಾಯಿ ಮತ್ತು ಮರಿಯನ್ನು ಇಂದು ಬೆಳಗಿನ ಜಾವವೇ ವೈದ್ಯರ ಸಲಹೆ ಮೇರೆಗೆ ಸುರಕ್ಷಿತವಾಗಿ ರಾಂಪುರ ಶಿಬಿರಕ್ಕೆ ಕಳುಹಿಸಲಾಗಿದ್ದು, ಇದರ ಜೊತೆಗೆ ಚೈತ್ರ ಆನೆಯನ್ನು ಸಹಾ ಜೊತೆಯಲ್ಲಿ ಕಳುಹಿಸಲಾಗಿದೆ ಎಂದು ಡಿಸಿಎಫ್ ಕರಿಕಾಳನ್ ಮಾಹಿತಿ ನೀಡಿದರು.
ಓದಿ: ಜಂಬೂಸವಾರಿ ಮೆರವಣಿಗೆಯಲ್ಲಿ ಮಹೇಂದ್ರ ಹೆಜ್ಜೆ ಹಾಕುತ್ತಿದ್ದಾಗ ದೇವರ ನೆನೆದೆ: ಮಾವುತ ರಾಜಣ್ಣ ಭಾವುಕ