ಮೈಸೂರು : ಬುಧವಾರ (ಇಂದು) ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆ ನಡೆಯಲಿದ್ದು, ಜೆಡಿಎಸ್ ಯಾರಿಗೆ ಬೆಂಬಲ ಕೊಡುತ್ತದೆಯೋ ಎಂಬುದು ಇನ್ನು ಕೆಲವೇ ಕ್ಷಣಗಳಲ್ಲಿ ತಿಳಿದು ಬರಲಿದೆ.
ಇಂದು ಮೈಸೂರು ಮಹಾ ನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆ ನಡೆಯಲಿದೆ. ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಈ ಹಿನ್ನೆಲೆ ನಿನ್ನೆ ಜೆಡಿಎಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯಿತು.
ಕಾಂಗ್ರೆಸ್ ಜೊತೆ ಮೈತ್ರಿ ಮುಂದುವರೆಸಬೇಕು ಅಥವಾ ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸಬೇಕು ಎಂಬುದರ ಬಗ್ಗೆ ಜೆಡಿಎಸ್ ಪಾಲಿಕೆ ಸದಸ್ಯರ ಸಭೆ ನಡೆಯಿತು. ಕೆಲವರು ಕಾಂಗ್ರೆಸ್ ಜೊತೆ ಮೈತ್ರಿ ಮುಂದುವರೆಸಿ ಎಂದರೆ, ಮತ್ತೆ ಕೆಲವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಿ ಎಂದರು. ಈ ಹಿನ್ನೆಲೆ ಬಿಜೆಪಿ ಇಂದ ಸಚಿವ ಎಸ್. ಟಿ . ಸೋಮಶೇಖರ್, ಕಾಂಗ್ರೆಸ್ನಿಂದ ತನ್ವೀರ್ ಸೇಠ್ ಕುಮಾರಸ್ವಾಮಿ ಜೊತೆ ಮಾತು ಕತೆ ನಡೆಸಿದರು.
ಜೆಡಿಎಸ್ ಪಕ್ಷ ಕಾಂಗ್ರೆಸ್ಗೆ ಅಥವಾ ಬಿಜೆಪಿಗೆ ಬೆಂಬಲ ನೀಡಿದರೆ ಆ ಪಕ್ಷದ ಅಭ್ಯರ್ಥಿಗಳು ಮೇಯರ್ ಆಗುತ್ತಾರೆ. ಏನಾದರೂ ಇಂದು ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಜೆಡಿಎಸ್ ತಟಸ್ಥವಾಗಿ ಉಳಿದರೆ ಮೇಯರ್ ಆಯ್ಕೆ ಮುಂದೆ ಹೋಗಬಹುದು.
ಮೈಸೂರು ಮಹಾ ನಗರ ಪಾಲಿಕೆಯಲ್ಲಿ ಒಟ್ಟು 65 ಸ್ಥನಗಳಿದ್ದು ಅದರಲ್ಲಿ ಬಿಜೆಪಿ 22 ಮಂದಿ ಪಾಲಿಕೆಯ ಸದಸ್ಯರು ಇದ್ದು , ಕಾಂಗ್ರೆಸ್ನ 19, ಜಾತ್ಯತೀತ ಜನತಾದಳದ 18, ಬಿಎಸ್ಪಿ 1 ಹಾಗೂ ಪಕ್ಷೇತರರು 6 ಮಂದಿ ಇದ್ದಾರೆ.
ಇದರ ಜೊತೆಗೆ ಒಬ್ಬ ಬಿಜೆಪಿ ಸಂಸದರು, ಇಬ್ಬರು ಬಿಜೆಪಿ ಶಾಸಕರು, ಕಾಂಗ್ರೆಸ್ನ ಒಬ್ಬ ಶಾಸಕ , ಜೆಡಿಎಸ್ನ ಒಬ್ಬ ಶಾಸಕ ಹಾಗೂ ಎಂಎಲ್ಸಿ ಸದಸ್ಯರು ಇದ್ದು ಇಂದಿನ ಮೇಯರ್ ಹಾಗೂ ಉಪಮೇಯರ್ ಚುನಾವಣೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.