ಮೈಸೂರು: ಕಾಡುಹಂದಿ ಬೇಟೆಗೆ ಹಾಕಿದ್ದ ಉರುಳಿಗೆ ಸಿಲುಕಿ ಮೃತಪಟ್ಟಿರುವ ಹುಲಿಯ ಮೂರು ಮರಿಗಳು ಇದೀಗ ಬೇಟೆಯಾಡಿ ಆಹಾರ ಪಡೆದುಕೊಳ್ಳುತ್ತಿರುವುದಾಗಿ ಅರಣ್ಯ ಇಲಾಖೆ ಮಾಹಿತಿ ನೀಡಿದೆ. ನಾಗರಹೊಳೆ ಅರಣ್ಯ ವ್ಯಾಪ್ತಿಯ ಅಂತರಸಂತೆ ವನ್ಯಜೀವಿ ವಲಯದ ತಾರಕ ಗ್ರಾಮದ ಜಮೀನೊಂದರಲ್ಲಿ ನ.12ರಂದು ಸುಮಾರು 12-13 ವರ್ಷದ ಹೆಣ್ಣು ಹುಲಿಯ ಕಳೇಬರ ಸಿಕ್ಕಿತ್ತು. ಈ ಹೆಣ್ಣು ಹುಲಿಗೆ ಮೂರು ಮರಿಗಳಿದ್ದು, ಅವುಗಳನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಇಲಾಖೆ ಮುಂದಾಗಿತ್ತು.
ಇದನ್ನೂ ಓದಿ: ಮೈಸೂರು: ಕಾಡುಹಂದಿ ಬೇಟೆಗೆ ಹಾಕಿದ್ದ ಉರುಳಿಗೆ ಸಿಲುಕಿ ಹೆಣ್ಣು ಹುಲಿ ಸಾವು
ಹುಲಿ ಮರಿಗಳ ಸಂರಕ್ಷಣೆಗಾಗಿ 130 ಇಲಾಖೆ ಸಿಬ್ಬಂದಿ, ಸಾಕಾನೆಗಳು, 30 ಟ್ರ್ಯಾಪಿಂಗ್ ಕ್ಯಾಮರಾ ಮತ್ತು 2 ಡ್ರೋನ್ ಕ್ಯಾಮರಾಗಳನ್ನು ಬಳಸಿಕೊಂಡು ಇಲಾಖೆಯು ಕಾರ್ಯಾಚರಣೆಗೆ ಮುಂದಾಗಿತ್ತು. ನ.16ರಂದು ಟ್ರ್ಯಾಪಿಂಗ್ ಕ್ಯಾಮರಾ ಪರಿಶೀಲಿಸಿದಾಗ ಹುಲಿಮರಿಗಳು ಜಿಂಕೆ ಕಳೇಬರದ ಬಳಿ ಬಂದು ಮಾಂಸ ತಿಂದಿರುವುದು ಕಂಡು ಬಂದಿದೆ. ಮೂರು ಹುಲಿ ಮರಿಗಳು 10 ರಿಂದ 11 ತಿಂಗಳ ಪ್ರಾಯದ್ದಾಗಿದ್ದು, ಬೇಟೆಯಾಡಿ ಆಹಾರ ತಿಂದಿರುವುದು ಆಶಾದಾಯಕ ಬೆಳವಣಿಗೆ ಎಂದು ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.