ಮೈಸೂರು: ಅಪಘಾತದಿಂದ ಒಂದೇ ಕುಟುಂಬದ ಮೂವರು ಮೃತಪಟ್ಟ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಅಪ್ರಾಪ್ತ ಬಾಲಕನ ಹುಚ್ಚಾಟಕ್ಕೆ ಮೂವರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಟಿ.ಕೆ.ಬಡಾವಣೆ ನಿವಾಸಿಗಳಾದ ರಮೇಶ್ (41), ಪತ್ನಿ ಉಷಾ (36), ಪುತ್ರ ಮನೀಶ್ (5) ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮೃತಪಟ್ಟಿದ್ದು, ಮತ್ತೊಬ್ಬ ಪುತ್ರ ಸಿದ್ದಾರ್ಥ (3) ಗಂಭೀರ ಗಾಯದಿಂದ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತನ ಚಿಕಿತ್ಸೆ ವೆಚ್ಚ ಹಾಗೂ ಮುಂದಿನ ಭವಿಷ್ಯ ಯಾರು ರೂಪಿಸುತ್ತಾರೆ ಎಂಬ ಚಿಂತೆ ಸಂಬಂಧಿಕರನ್ನು ಕಾಡಿದೆ.
ಏನಿದು ಘಟನೆ: ರಮೇಶ್ ತಮ್ಮ ಪತ್ನಿಯ ಸಂಬಂಧಿಕರೊಬ್ಬರ ತಿಥಿ ಕಾರ್ಯಕ್ಕಾಗಿ ಸಿದ್ದಲಿಂಗಪುರಕ್ಕೆ ಕುಟುಂಬ ಸಮೇತರಾಗಿ ಹೋಗಿ ಊಟ ಮುಗಿಸಿಕೊಂಡು ವಾಪಸ್ ಬರುತ್ತಿದ್ದರು. ಗುರುವಾರ ರಾತ್ರಿ 10.30ರ ವೇಳೆ 9ನೇ ತರಗತಿಯ ಅಪ್ರಾಪ್ತ ಬಾಲಕ ಪೂರ್ಣ ಪ್ರಮಾಣದಲ್ಲಿ ಕಾರು ಕಲಿಯದೆ ಮುಖ್ಯ ರಸ್ತೆಗೆ ಬಂದು ಮೂವರ ಪ್ರಾಣ ಪಕ್ಷಿ ಹಾರಿಸಿದ್ದಾನೆ ಎನ್ನಲಾಗಿದೆ.
ಓದಿ: ಮೈಸೂರಿನಲ್ಲಿ ಕಾರು - ಬೈಕ್ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ ಮೂವರು ಸಾವು
ರಿಂಗ್ ರಸ್ತೆಯ ಮೂಲಕ ಕಾರು ಚಲಾಯಿಸಿಕೊಂಡು ಬೆಂಗಳೂರು ಕಡೆಗೆ ಹೋಗುತ್ತಿದ್ದಾಗ ದಂಡಿ ಮಾರಮ್ಮನ ದೇವಸ್ಥಾನದ ಬಳಿ ಕಾರು ನಿಯಂತ್ರಣ ತಪ್ಪಿದೆ. ಬಳಿಕ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ರಸ್ತೆಯ ಮತ್ತೊಂದು ಬದಿಗೆ ನುಗ್ಗಿದೆ. ಆ ವೇಳೆ ಕುಟುಂಬ ಸಮೇತ ಬೈಕ್ನಲ್ಲಿ ಬರುತ್ತಿದ್ದ ರಮೇಶ್ ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಬಾಲಕ ಸ್ಥಳದಿಂದಲೇ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಕಾರಿನ ನಂಬರ್ ಬೆನ್ನತ್ತಿದ ವಿವಿ ಪುರಂ ಸಂಚಾರ ಠಾಣಾ ಪೊಲೀಸರು, ವಿಳಾಸ ಪತ್ತೆ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಬಾಲಕ ಮನೆಯಿಂದ ಪರಾರಿಯಾಗಿದ್ದು, ಆತನ ಪೋಷಕರಿಗೆ ಈಗ ಪೀಕಲಾಟ ಶುರುವಾಗಿದೆ.