ಮೈಸೂರು: ಸ್ನಾನದ ಮಾಡಲು ಹೋಗಿದ್ದ ಮೂವರು ಅಯ್ಯಪ್ಪ ಮಾಲಾಧಾರಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ನಂಜನಗೂಡು ಪಟ್ಟಣದ ಕಪಿಲಾ ನದಿಯ ಹೆಜ್ಜಿಗೆ ಸೇತುವೆ ಬಳಿ ಸಂಭವಿಸಿದೆ. ಮೃತರನ್ನು ತುಮಕೂರು ಮೂಲದ ಗವಿ ರಂಗ (19), ರಾಕೇಶ್ (19) ಹಾಗೂ ಅಪ್ಪು (16) ಎಂದು ಗುರುತಿಸಲಾಗಿದೆ.
ಶಬರಿಮಲೈ ಅಯ್ಯಪ್ಪ ಸ್ವಾಮಿ ದರ್ಶನ ಮುಗಿಸಿಕೊಂಡು, ದಕ್ಷಿಣದ ಕಾಶಿ ನಂಜನಗೂಡು ನಂಜುಂಡೇಶ್ವರನ ದರ್ಶನಕ್ಕಾಗಿ ಗುರುವಾರ ತಡರಾತ್ರಿ ಆಗಮಿಸಿದ್ದರು. ಮುಂಜಾನೆ ಸ್ನಾನ ಮಾಡಿಕೊಂಡು ನಂಜನಗೂಡಿಗೆ ತೆರಳಲು ನಿರ್ಧರಿಸಿದ್ದು, ಹೆಜ್ಜಿಗೆ ಸೇತುವೆ ಬಳಿ ಐವರು ಮಾಲಾಧಾರಿಗಳು ನದಿ ನೀರಿಗಿಳಿದಿದ್ದರು. ಆದರೆ ನೀರಿನ ಸುಳಿಗೆ ಸಿಲುಕಿ, ಮೂವರು ಮೇಲೇಳಲಾಗದೆ ಮುಳುಗಿ ಮೃತಪಟ್ಟಿದ್ದಾರೆ. ಉಳಿದ ಇಬ್ಬರು ನದಿ ದಡ ತಲುಪಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದು ನಂಜನಗೂಡು ಪಟ್ಟಣದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಮೃತರಿಗಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಒಬ್ಬ ಮಾಲಾಧಾರಿಯ ಶವ ಹೊರ ತೆಗೆಯಲಾಗಿದ್ದು, ಉಳಿದವರಿಗಾಗಿ ಶೋಧ ಮುಂದುವರೆದಿದೆ. ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಚಿತ್ರದುರ್ಗ: ಟ್ಯಾಂಕರ್ ಲಾರಿಗೆ ಕಾರು ಡಿಕ್ಕಿ, ಇಬ್ಬರು ಮಹಿಳೆಯರು ಸಾವು