ಮೈಸೂರು: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ಯಾಪ್ಸಿಕಂ ರವಿಯನ್ನ ಬರ್ಬರವಾಗಿ ಹತ್ಯೆ ಮಾಡಿದ್ದ ಮೂವರು ಆರೋಪಿಗಳನ್ನು ಬೆಂಗಳೂರಿನ ಹೊರವಲಯದಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಗಳು ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದರು.
ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ರವಿ ನೇತೃತ್ವದ ತನಿಖಾ ತಂಡ ಆರೋಪಿಗಳನ್ನು ಬಂಧಿಸಿದೆ. ಬಳಿಕ ಮೈಸೂರಿಗೆ ಕರೆತಂದು ಅಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ, ರವಿಯ ಹತ್ಯೆಗೆ ಕಾರಣಗಳನ್ನ ಬಿಚ್ಚಿಟ್ಟಿರುವ ಆರೋಪಿಗಳು ಆತ ತರಕಾರಿ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸಿದ್ದಲ್ಲದೆ, ಕೋಟ್ಯಂತರ ರೂಪಾಯಿ ಅಸ್ತಿ ಸಂಪಾದನೆ ಮಾಡಿದ್ದ. ಒಂದೆರಡು ಬಾರಿ ರವಿ ಬಳಿ ಹಣದ ಸಹಾಯ ಕೇಳಿದಾಗ ಕೊಡಲು ನಿರಾಕರಿಸಿದ್ದ. ಆದ್ದರಿಂದ ದ್ವೇಷ ಉಂಟಾಗಿ ಕೊಲೆ ನಡೆದಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.
ಆರೋಪಿಗಳಿಂದ ಕೊಲೆಗೆ ಬಳಸಿದ್ದ ಮಾರಕಾಸ್ತ್ರಗಳು ಹಾಗೂ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಎಪಿಎಂಸಿ ಆವರಣಕ್ಕೆ ಕರೆತಂದು ಹತ್ಯೆಮಾಡಿದ ಸ್ಥಳದ ಮಹಜರು ನಡೆಸಿದ್ದಾರೆ. ಆರೋಪಿಗಳು ಮೈಸೂರಿನವರೇ ಆಗಿದ್ದು, ಬಂಡಿಪಾಳ್ಯ ಎಪಿಎಂಸಿ ಮಾರುಕಟ್ಟೆಯ ವರ್ತಕರೇ ಎಂದು ಹೇಳಲಾಗುತ್ತಿದೆ.
ಈ ಪ್ರಕರಣ ಸಂಬಂಧ ಇನ್ನೂ ತನಿಖೆ ನಡೆಯುತ್ತಿರುವುದರಿಂದ ಬಳಿಕ ಸಂಪೂರ್ಣ ಮಾಹಿತಿ ನೀಡುವುದಾಗಿ ಎಸ್ಪಿ ಆರ್. ಚೇತನ್ ತಿಳಿಸಿದ್ದಾರೆ.
ಇದನ್ನೂ ಓದಿ: 'ರಾಂಗ್ ಸೈಡ್ ಡ್ರೈವ್' ಪ್ರಶ್ನಿಸಿದ್ದಕ್ಕಾಗಿ ಲೇಡಿ ಕಾನ್ಸ್ಟೇಬಲ್ಗೆ ಚಪ್ಪಲಿಯಿಂದ ಥಳಿಸಿದ ಮಹಿಳೆ!