ಜೆರುಸಲೇಂ, ಇಸ್ರೇಲ್: ಕಳೆದ ಎರಡು ದಿನಗಳಲ್ಲಿ ಇಸ್ರೇಲ್ ಲೆಬನಾನ್ ಮೇಲೆ ಹಲವಾರು ದಾಳಿಗಳನ್ನು ನಡೆಸಿದೆ. ಹಿಜ್ಬುಲ್ಲಾ ಕದನವಿರಾಮ ಉಲ್ಲಂಘಿಸಿರುವುದರಿಂದ ಲೆಬನಾನ್ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ.
ಹಿಜ್ಬುಲ್ಲಾ ಉಗ್ರರು ಅಡಗಿದ್ದ ಚರ್ಚ್ ಮೇಲೆ ದಾಳಿ ನಡೆಸಿರುವುದಾಗಿ ಸೇನೆ ತಿಳಿಸಿದೆ. ಹಿಜ್ಬುಲ್ಲಾದ ಖಿಯಾಮ್ ಗ್ರೌಂಡ್ ಡಿಫೆನ್ಸ್ ನ ಟ್ಯಾಂಕ್ ವಿರೋಧಿ ಕ್ಷಿಪಣಿ ಮತ್ತು ಫಿರಂಗಿ ಘಟಕಗಳ ಸದಸ್ಯರು ಎಂದು ಗುರುತಿಸಲ್ಪಟ್ಟ ಉಗ್ರರು ಚರ್ಚ್ನಿಂದ ಇಸ್ರೇಲ್ ಪಡೆಗಳ ಮೇಲೆ ಗುಂಡು ಹಾರಿಸಿದ ನಂತರ ತಾನು ಪ್ರತಿದಾಳಿ ನಡೆಸಿರುವುದಾಗಿ ಇಸ್ರೇಲ್ ಹೇಳಿದೆ.
"ಕಳೆದ ಒಂದು ದಿನದಿಂದ ಇಸ್ರೇಲ್ ದೇಶಕ್ಕೆ ಅಪಾಯ ಉಂಟು ಮಾಡಬಲ್ಲ, ಕದನ ವಿರಾಮ ಒಪ್ಪಂದದ ಉಲ್ಲಂಘನೆಗಳನ್ನು ತಡೆಗಟ್ಟಲು ಐಡಿಎಫ್ (ಇಸ್ರೇಲ್ ರಕ್ಷಣಾ ಪಡೆಗಳು) ಲೆಬನಾನ್ನ ಹಲವಾರು ಸ್ಥಳಗಳ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸಿದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಐಡಿಎಫ್ ಈಗಲೂ ಲೆಬನಾನ್ ನಲ್ಲಿಯೇ ಬೀಡು ಬಿಟ್ಟಿದ್ದು, ಇಸ್ರೇಲ್ ಗೆ ಸಂಭವನೀಯ ಅಪಾಯಗಳನ್ನು ತಡೆಗಟ್ಟಲು ಕೆಲಸ ಮಾಡುತ್ತಿದೆ ಎಂದು ಇಸ್ರೇಲ್ ತಿಳಿಸಿದೆ.
ಇಸ್ರೇಲ್ ಕನಿಷ್ಠ 52 ಪ್ರತ್ಯೇಕ ಘಟನೆಗಳಲ್ಲಿ ಲೆಬನಾನ್ ಜೊತೆಗಿನ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಇದಕ್ಕೂ ಮುನ್ನ ಭಾನುವಾರ ಫ್ರೆಂಚ್ ರಾಜತಾಂತ್ರಿಕರು ಆರೋಪಿಸಿದ್ದಾರೆ. ಇಂತಹ ಉಲ್ಲಂಘನೆಗಳು ಕದನ ವಿರಾಮ ಒಪ್ಪಂದವನ್ನು ಕೊನೆಗೊಳಿಸುವ ಅಪಾಯವಿದೆ ಎಂದು ಫ್ರಾನ್ಸ್ ಎಚ್ಚರಿಸಿದೆ. ಅಕ್ಟೋಬರ್ನಲ್ಲಿ ಇಸ್ರೇಲ್ ಮತ್ತು ಹಿಜ್ಬುಲ್ಲಾ ಮಧ್ಯೆ ಭುಗಿಲೆದ್ದ ಸಂಘರ್ಷ ಕೊನೆಗಾಣಿಸಲು ಕಳೆದ ವಾರ 60 ದಿನಗಳ ಕದನ ವಿರಾಮಕ್ಕೆ ಸಹಿ ಹಾಕಲಾಗಿದೆ.
ಪರಿಹಾರ ಸಾಮಗ್ರಿಗಳ ಲೂಟಿ: ಇಸ್ರೇಲ್ ಮತ್ತು ಹಮಾಸ್ ನಡುವೆ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದ ಹೋರಾಟದಿಂದ ಎದುರಾಗಿರುವ ತೀವ್ರ ಆಹಾರ ಬಿಕ್ಕಟ್ಟಿನ ಮಧ್ಯೆ, ಪರಿಹಾರ ಕಾರ್ಯಾಚರಣೆ ಬೆಂಗಾವಲು ಪಡೆಯ ಮೇಲೆ ಮತ್ತೆ ಸಶಸ್ತ್ರ ಗುಂಪುಗಳು ದಾಳಿ ನಡೆಸಿದ್ದರಿಂದ ಪ್ಯಾಲೆಸ್ಟೈನ್ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಏಜೆನ್ಸಿಯು (ಯುಎನ್ಆರ್ಡಬ್ಲ್ಯೂಎ) ಗಾಜಾ ಪಟ್ಟಿಯ ಮುಖ್ಯ ಜೀವನಾಡಿಯ ಮೂಲಕ ಪರಿಹಾರ ಸಾಮಗ್ರಿ ಮತ್ತು ಆಹಾರ ಪೂರೈಕೆಯನ್ನು ಸ್ಥಗಿತಗೊಳಿಸಿದೆ.
ಇಸ್ರೇಲ್ ಗಡಿಯಲ್ಲಿರುವ ಕೆರೆಮ್ ಶಲೋಮ್ನಿಂದ ರಸ್ತೆಯಲ್ಲಿ ಆಹಾರ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಹಲವಾರು ಟ್ರಕ್ಗಳನ್ನು ಲೂಟಿ ಮಾಡಲಾಗಿದೆ ಎಂದು ಯುಎನ್ಆರ್ಡಬ್ಲ್ಯೂಎ ಮುಖ್ಯಸ್ಥ ಫಿಲಿಪ್ ಲಝಾರಿನಿ ಭಾನುವಾರ ತಿಳಿಸಿದ್ದಾರೆ. ಕಳೆದ ತಿಂಗಳು ಸುಮಾರು 100 ಪರಿಹಾರ ಸಾಮಗ್ರಿಯ ಟ್ರಕ್ಗಳನ್ನು ಅಪಹರಿಸಿದ್ದನ್ನು ಉಲ್ಲೇಖಿಸಿದ ಅವರು, ಈ ಮಾರ್ಗವು ಕಳೆದ ಹಲವಾರು ತಿಂಗಳುಗಳಿಂದ ಅಸುರಕ್ಷಿತವಾಗಿದೆ ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : ಎಫ್ಬಿಐ ನಿಯೋಜಿತ ಮುಖ್ಯಸ್ಥರಾಗಿ ಇಂಡಿಯನ್-ಅಮೆರಿಕನ್ ಕಾಶ್ ಪಟೇಲ್ ನೇಮಕ: ಏನಿವರ ಹಿನ್ನೆಲೆ?