ಮೈಸೂರು: ಕದ್ದ ದೇವರ ತಾಳಿಯನ್ನ ವಾಪಸ್ ತಂದಿಟ್ಟು ಜೊತೆಗೆ 101 ರೂಪಾಯಿ ತಪ್ಪು ಕಾಣಿಕೆ ಇಟ್ಟು ಹೋಗಿರುವ ಘಟನೆ ನಂಜನಗೂಡು ತಾಲೂಕಿನ ಉಪ್ಪಿನ ಹಳ್ಳಿ ಗ್ರಾಮದ ದುರ್ಗಾಂಬ ದೇವಸ್ಥಾನದಲ್ಲಿ ನಡೆದಿದೆ.
ಜಿಲ್ಲೆಯ ನಂಜನಗೂಡು ತಾಲೂಕಿನ ಉಪ್ಪಿನ ಹಳ್ಳಿ ಗ್ರಾಮದಲ್ಲಿನ ದುರ್ಗಾಂಬ ದೇವಸ್ಥಾನದಲ್ಲಿ ಕಳೆದ ವಾರ ದೇವರ ತಾಳಿ ಹಾಗೂ ಹುಂಡಿಯಲ್ಲಿದ್ದ ಹಣವನ್ನ ಆರೋಪಿಗಳು ಕದ್ದೊಯ್ದಿದ್ದರು. ಇದೀಗ ತಪ್ಪಿನ ಅರಿವಾಗಿ ತಾಳಿಯನ್ನ ದೇವಸ್ಥಾನದ ಮುಂದೆ ಇಟ್ಟು 101 ರೂಪಾಯಿ ತಪ್ಪು ಕಾಣಿಕೆಯನ್ನ ಇಟ್ಟು ಹೋಗಿದ್ದಾರೆ.
ಕಳೆದ ತಿಂಗಳ 24 ರಂದು ದೇವಾಲಯದ ಮುಖ್ಯ ಬಾಗಿಲನ್ನ ಒಡೆದು ಹುಂಡಿಯನ್ನ ಕಳವು ಮಾಡಿದ್ದರು. ಆದರೆ, ಅದೇ ಸಂದರ್ಭದಲ್ಲಿ ದೇವಾಲಯದ ಗರ್ಭಗುಡಿ ಬಾಗಿಲು ಒಡೆಯಲು ವಿಫಲರಾಗಿದ್ದು, ಕಿಟಕಿಯ ಮೂಲಕ ಕಡ್ಡಿಯ ಸಹಾಯದಿಂದ ದೇವರ ಮೇಲಿದ್ದ ಚಿನ್ನದ ತಾಳಿಯನ್ನ ಕದ್ದು ಪರಾರಿ ಆಗಿದ್ದರು.
ಆದರೆ, ಹುಂಡಿ ಕದ್ದ ಕಳ್ಳರು ತಾಳಿಯನ್ನ ವಾಪಸ್ ತಂದು ದೇವಾಲಯದ ಬಳಿ ಇಟ್ಟು 101 ರೂಪಾಯಿ ತಪ್ಪೊಪ್ಪಿಗೆ ಕಾಣಿಕೆಯನ್ನ ಇಟ್ಟು ಹೋಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಓದಿ: ಕಾನೂನು ಪದವಿ ಪರೀಕ್ಷೆ ಬರೆಯಲು ಅನುಕಂಪದ ಆಧಾರದಲ್ಲಿ ಅವಕಾಶ ನೀಡಲು ಹೈಕೋರ್ಟ್ ಸೂಚನೆ