ಮೈಸೂರು: ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ಜನರ ಕಷ್ಟ ಕೇಳುವುದು ಬಿಟ್ಟು ಲೂಟಿ ಹೊಡೆಯುವುದೇ ಈ ಸರ್ಕಾರದ ಕೆಲಸವಾಗಿಬಿಟ್ಟಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರವಾಹದಿಂದ ಕೆಲವು ಜಿಲ್ಲೆಗಳಲ್ಲಿ ಸಂಕಷ್ಟ ಎದುರಾಗಿದ್ದು, ಅವರಿಗೆ ಒಂದು ಪೈಸೆ ಕೂಡ ಪರಿಹಾರ ನೀಡಿಲ್ಲ. ಕೇಂದ್ರ ಸರ್ಕಾರವೂ ಸಹ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಸರ್ಕಾರಕ್ಕೆ ಇದರ ಬಗ್ಗೆ ಚರ್ಚೆ ಮಾಡಿ ಎಂದು ಎರಡು ಬಾರಿ ಪತ್ರ ಬರೆದರೂ ಉತ್ತರವಿಲ್ಲ. ಸಚಿವರು ಬರುತ್ತಾರೆ ಡಿಸಿ ಆಫೀಸ್ನಲ್ಲಿ ಮೀಟಿಂಗ್ ಮಾಡಿ ಹೋಗುತ್ತಾರೆ. ಯಾವ ಉಸ್ತುವಾರಿ ಸಚಿವರೂ ತಮ್ಮ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿಲ್ಲ. ಇವರಿಗೆ ಲೂಟಿ ಹೊಡೆಯುವುದು ಬಿಟ್ಟರೆ ಬೇರೆ ಏನು ಕೆಲಸ ಇಲ್ಲ ಎಂದು ಕಿಡಿಕಾರಿದರು.
ಉಪ ಚುನಾವಣೆಯನ್ನು ಸರ್ಕಾರ ಮುಕ್ತವಾಗಿ, ಸ್ವತಂತ್ರವಾಗಿ ನಡೆಸಿಲ್ಲ. ಅಧಿಕಾರ ದುರುಪಯೋಗ ಮಾಡಿಕೊಂಡು, ಹಣದ ಹೊಳೆಯಲ್ಲಿ ಮತದಾರರನ್ನು ಕೊಂಡುಕೊಳ್ಳುವ ಕೆಲಸ ಮಾಡಿದ್ದಾರೆ. ಬಿಜೆಪಿಯವರು ದುಡ್ಡು ಖರ್ಚು ಮಾಡುವುದರಲ್ಲಿ ನಿಸ್ಸೀಮರು. ಅದೇ ರೀತಿ ದುಡ್ಡು ಹೊಡೆಯುವುದರಲ್ಲೂ ನಿಸ್ಸೀಮರು ಎಂದು ದೂರಿದರು.
ಈ ಸರ್ಕಾರಕ್ಕೆ ಪ್ರಸ್ತಾಪ ಮಾಡದೆ ಹೋದರೆ ಉತ್ತರ ಕೊಡಲ್ಲ. 15 ದಿನ ಅಸೆಂಬ್ಲಿ ನಡೆಸಿ ಅಂದರೆ 6 ದಿನಕ್ಕೆ ಕ್ಲೋಸ್ ಮಾಡುತ್ತಾರೆ. ಎಲ್ಲಿ ಹೇಳುವುದು? ಸಿಎಂ ಮನೆಗೆ ಹೋಗಿ ಹೇಳಾಬೇಕಾ ಸರ್ಕಾರದ ವಿರುದ್ಧ ಗುಡುಗಿದರು.