ಮೈಸೂರು: 'ಸಾಹಸಸಿಂಹ' ಖ್ಯಾತಿಯ ಪ್ರಸಿದ್ಧ ನಟ ಡಾ.ವಿಷ್ಣುವರ್ಧನ್ ಅವರು ಕೊನೆಯುಸಿರೆಳೆದು 12 ವರ್ಷಗಳ ಬಳಿಕ ಅವರ ಹೆಸರಿನಲ್ಲಿ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಗೊಂಡಿದೆ. ಮೈಸೂರು-ಹೆಚ್.ಡಿ.ಕೋಟೆ ರಸ್ತೆಯ ಹಾಲಾಳು ಗ್ರಾಮದಲ್ಲಿರುವ ಈ ಸ್ಮಾರಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಉದ್ಘಾಟನೆ ಮಾಡಿದ್ದಾರೆ. ಆದ್ರೆ, ರಾತ್ರಿ ವೇಳೆ ವಿಷ್ಣು ಸ್ಮಾರಕದ ಬಳಿ ವಿದ್ಯುತ್ ದೀಪದ ವ್ಯವಸ್ಥೆ ಮಾಡದೇ ಇರುವುದು ಅಭಿಮಾನಿಗಳಲ್ಲಿ ಆಕ್ರೋಶ ಉಂಟುಮಾಡಿದೆ.
ಭಾನುವಾರ ಬೆಳಗ್ಗೆಯಿಂದಲೇ ಸ್ಮಾರಕ ವೀಕ್ಷಣೆಗೆ ಆಗಮಿಸಿದ್ದ ಸಾರ್ವಜನಿಕರು, ಅಭಿಮಾನಿಗಳು ಮಧ್ಯಾಹ್ನ 2 ಗಂಟೆಯವರೆಗೂ ಕಾದು ಕುಳಿತಿದ್ದರು. ಬಳಿಕ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದು ನಿರೀಕ್ಷೆಗೂ ಮೀರಿ ಜನ ಸಾಗರ ಹರಿದು ಬಂದಿತ್ತು. ಸಂಜೆಯ ಸಮಯದಲ್ಲಿ ಸ್ಮಾರಕ ವೀಕ್ಷಿಸಲು ಆಗಮಿಸಿದ ಅಭಿಮಾನಿಗಳು ವಿದ್ಯುತ್ ದೀಪದ ವ್ಯವಸ್ಥೆ ಇಲ್ಲದಿರುವುದಿಂದ ಓಡಾಡಲು ಪರದಾಡಿದರು. "ರಾತ್ರಿ ಸಮಯದಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಕಲ್ಪಿಸದೇ ಕೇವಲ ಪ್ರಚಾರಕ್ಕಾಗಿ ಕಾರ್ಯಕ್ರಮ ನಡೆಸಿ, ಅಭಿಮಾನಿಗಳಿಗೆ ಅವಮಾನ ಮಾಡಲಾಗಿದೆ. ಇದು ವಿಷ್ಣು ಅವರಿಗೆ ರಾಜ್ಯ ಸರ್ಕಾರ ಮಾಡಿದ ಅಪಮಾನ" ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದರು.
"ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇತರೇ ಯಾವುದೇ ಅಗತ್ಯ ಸೌಲಭ್ಯ ಇಲ್ಲ. 11 ಕೋಟಿ ರೂ.ಖರ್ಚು ಮಾಡಿ ಸ್ಮಾರಕ ಉದ್ಘಾಟನೆ ಮಾಡಲಾಗಿದೆ. ಆದ್ರೆ, ರಾತ್ರಿ ವೇಳೆ ಸ್ಮಾರಕ ನೋಡಲು ಬರುವ ಅಭಿಮಾನಿಗಳಿಗೆ ಸೂಕ್ತ ವಿದ್ಯುತ್ ಬೆಳಕಿನ ವ್ಯವಸ್ಥೆ ಮಾಡಿಲ್ಲ. ಸರ್ಕಾರದ ನಿರ್ಲಕ್ಯ ಮತ್ತು ಬೇಜವಾಬ್ದಾರಿತನ ಎದ್ದು ತೋರುತ್ತಿದೆ" ಎಂದು ಆಕ್ರೋಶ ಹೊರಹಾಕಿದರು.
"ಸರ್ಕಾರಕ್ಕೆ ಇದು ನಾಚಿಕೆಗೇಡಿನ ಸಂಗತಿ. ಇಲ್ಲಿಗೆ ಫಿಲ್ಮಂ ಚೇಂಬರ್ನವರು ಯಾರೂ ಬಂದಿಲ್ಲ, ಚಿತ್ರನಟರೂ ಬಂದಿಲ್ಲ. ಊಟದ ವ್ಯವಸ್ಥೆ ಹಾಳಾಗಿ ಹೋಗಲಿ, ಡಾ.ವಿಷ್ಣುವರ್ಧನ್ ಅವರಿಗೆ ಸರ್ಕಾರ ಗೌರವ ಕೊಡುತ್ತಿಲ್ಲ. ಕಾಟಾಚಾರಕ್ಕೆ ಇದನ್ನು ಮಾಡಿದ್ದಾರೆ. ಇದರಿಂದ ಏನೂ ಪ್ರಯೋಜನವಿಲ್ಲ. ಸರ್ಕಾರ ಈ ಎಲ್ಲಾ ರೀತಿಯ ವ್ಯವಸ್ಥೆ ಮಾಡದೇ ಇದ್ದರೂ ವಿಷ್ಣುವರ್ಧನ್ ಬೆಲೆ ಇದ್ದೇ ಇರುತ್ತದೆ. ವಿಷ್ಣು ಸ್ಮಾರಕ ಕತ್ತಲೆಯಲ್ಲಿ ಇಟ್ಟಿರುವ ಸರ್ಕಾರ, ಈ ಕಾರ್ಯಕ್ರಮ ಮಾಡುವ ಅಗತ್ಯವಿರಲಿಲ್ಲ. ದಯವಿಟ್ಟು ಈ ರೀತಿ ಕಾರ್ಯಕ್ರಮ ಮಾಡಬೇಡಿ" ಎಂದು ಅಭಿಮಾನಿ ಮದನ್ಕುಮಾರ್ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ನಾಲ್ವರು ಶಿಲ್ಪಿಗಳು, 10 ದಿನ : ಕೃಷ್ಣಶಿಲೆಯಲ್ಲಿ ಮೈದಳೆದ ವಿಷ್ಣುವರ್ಧನ್ ಪ್ರತಿಮೆ
"ತುಂಬಾ ವರ್ಷದಿಂದ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆಗಾಗಿ ಕಾಯುತ್ತಿದ್ದೆವು. ಮೈಸೂರಿನಲ್ಲಿ ಸಾಹಸ ಸಿಂಹನ ಸ್ಮಾರಕ ನಿರ್ಮಾಣವಾಗಿರುವುದು ಖುಷಿ ತಂದಿದೆ. ಮಧ್ಯಾಹ್ನದ ವೇಳೆಗೆ ಇಲ್ಲಿಗೆ ಬಂದಾಗ ಹೆಚ್ಚು ಜನಸಂದಣಿ ಇತ್ತು. ಹಾಗಾಗಿ, ರಾತ್ರಿ ಬರೋಣವೆಂದು ತೀರ್ಮಾನಿಸಿ ಈಗ ಬಂದಿದ್ದೇವೆ. ಆದ್ರೆ ಇಲ್ಲಿ ಬೆಳಕಿನ ವ್ಯವಸ್ಥೆ ಇಲ್ಲ, ಸರ್ಕಾರ ಕೊನೆಯ ಪಕ್ಷ ಒಂದು ತಿಂಗಳಾದರೂ ಇಲ್ಲಿ ವಿದ್ಯುತ್ ವ್ಯವಸ್ಥೆ ಮಾಡಬೇಕು. ರಾತ್ರಿ ವೇಳೆ ಸಹ ಅನೇಕ ಅಭಿಮಾನಿಗಳು ಸ್ಮಾರಕ ನೋಡಲು ಆಗಮಿಸುತ್ತಿದ್ದಾರೆ" ಎಂದು ಸ್ಥಳೀಯರಾದ ರೋಹಿಣಿ ಮನವಿ ಮಾಡಿದರು.