ಮೈಸೂರು: ರಾಜ್ಯದಲ್ಲಿ ಎರಡನೇ ಬಾರಿ ಲಾಕ್‌ಡೌನ್ ಮುಂದೂಡಿದ್ದರೂ, ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಕರೆದಿರುವ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ದಿನಾಂಕವನ್ನು ಮುಂದೂಡದೇ ಇರುವುದು ಅಭ್ಯರ್ಥಿಗಳಲ್ಲಿ ಅಸಮಾಧಾನ ತಂದಿದೆ.
ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) 2019-20ನೇ ಸಾಲಿನ ರಾಜ್ಯದ ವಿವಿಧ ಇಲಾಖೆಗಳಿಗೆ ಕಿರಿಯ ಸಹಾಯಕರ / ದ್ವಿತೀಯ ದರ್ಜೆ ಸಹಾಯಕರ 199 ಹುದ್ದೆಗಳಿಗಾಗಿ ಅಧಿಸೂಚನೆ ಹೊರಡಿಸಿದಾಗ ಮೊದಲ ಬಾರಿ ಅರ್ಜಿ ಸಲ್ಲಿಸಲು ಮಾ.9 ರಿಂದ ದಿನಾಂಕ ಘೋಷಣೆ ಮಾಡಲಾಗಿತ್ತು. ಏ.9 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹಾಗೂ ಶುಲ್ಕ ಪಾವತಿಸಲು ಏ.13ರಂದು ದಿನಾಂಕ ನಿಗದಿಗೊಳಿಸಲಾಗಿದ್ದು, ಮೊದಲ ಬಾರಿ ಲಾಕ್‌ಡೌನ್ ನಿಯಮ ಏ.14ರವಗೆ ಇದ್ದ ಪರಿಣಾಮ ಅರ್ಜಿ ಸಲ್ಲಿಸಲು ಆಗುವುದಿಲ್ಲವೆಂದು ಸಾಕಷ್ಟು ದೂರುಗಳು ಕೇಳಿ ಬಂದಿತು.
ಏಪ್ರಿಲ್ 1ರಂದು ಕೆಪಿಎಸ್‌ಸಿ ಕಚೇರಿಯು ಕೋವಿಡ್-19 ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತಿರುವುದನ್ನು ಮನಗಂಡು ಏ.30 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹಾಗೂ ಮೇ 2ರವರಗೆ ಶುಲ್ಕ ಪಾವತಿಗೆ ಅವಕಾಶವೆಂದು ಪ್ರಕಟಣೆ ಹೊರಡಿಸಿತು.
ಆದರೆ, ಪ್ರಧಾನಿ ನರೇಂದ್ರ ಮೋದಿ ಏ.14ರಂದು ದೇಶವನ್ನುದ್ದೇಶಿಸಿ ಮಾತನಾಡಿ, ಮೇ.3 ರವರಗೆ ಲಾಕ್‌ಡೌನ್ ಮುಂದೂವರಿಸುವಂತೆ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದರು. ಅದರಂತೆ ಎಲ್ಲಾ ರಾಜ್ಯಗಳು ಲಾಕ್‌ಡೌನ್ ಮುಂದುವರಿಸಿವೆ. ಆದರೆ, ಕೆಪಿಎಸ್‌ಸಿ ಮೊದಲ ಬಾರಿ ಲಾಕ್‌ಡೌನ್ ಆಗಿದ್ದ ವೇಳೆಯಲ್ಲಿ ಎಸ್‌ಡಿಎಗೆ ಮರು ದಿನಾಂಕ ನಿಗದಿಗೊಳಿಸಿತು. ಮತ್ತೆ ಎರಡನೇ ಲಾಕ್‌ಡೌನ್ ಘೋಷಣೆಯಾದಾಗ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡದೇ ಇರುವುದು ಅಭ್ಯರ್ಥಿಗಳಲ್ಲಿ ಅಸಮಾಧಾನ ತಂದಿದೆ.