ಮೈಸೂರು: ಹುಣಸೂರು ಉಪ ಚುನಾವಣೆ ಮತದಾನ ಮುಕ್ತಯವಾಗಿದ್ದು, ಫಲಿತಾಂಶಕ್ಕೂ ಮುನ್ನ ಅಭ್ಯರ್ಥಿಗಳು ಟೆಂಪಲ್ ರನ್ ಶುರು ಮಾಡಿದ್ದಾರೆ.
ಉಪ ಚುನಾವಣೆಯಲ್ಲಿ ದಾಖಲೆಯ ಮತದಾನವಾಗಿದ್ದು, ಈ ಹಿನ್ನೆಲೆ ಮೂರು ಪಕ್ಷಗಳ ಅಭ್ಯರ್ಥಿಗಳು ತಮ್ಮನ್ನು ಗೆಲ್ಲಿಸುವಂತೆ ದೇವರ ಮೊರೆ ಹೋಗಿದ್ದಾರೆ. ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಚುನಾವಣೆಯ ನಂತರದ ಸಮೀಕ್ಷೆಯಲ್ಲಿ ಹಿನ್ನಡೆಯಾಗಿದೆ ಎಂಬ ಸುದ್ದಿ ತಿಳಿದು ಇಂದು ಬೆಂಗಳೂರಿನಿಂದ ವಿಮಾನದ ಮೂಲಕ ಶಿರಡಿ ತೆರಳಿದ್ದಾರೆ. ಇಂದು ಸಾಯಿಬಾಬಾ ದರ್ಶನ ಪಡೆದು ಇಂದು ಅಲ್ಲೇ ತಂಗಿ, ನಾಳೆ ಬೆಳಗ್ಗೆ ಹೋಮ ಹವನ ನಡೆಸಿ ಸಂಜೆ ಮೈಸೂರಿಗೆ ವಾಪಾಸ್ ಅಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು ಸಮೀಕ್ಷೆಗಳ ಪ್ರಕಾರ ಗೆಲುವಿನ ನಿರೀಕ್ಷೆಯಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ ನಿನ್ನೆ ಬೆಳಗ್ಗೆ ವಿಶ್ರಾಂತಿ ಪಡೆದು ಸಂಜೆ ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆದು ಸುತ್ತಮುತ್ತಲಿರುವ ದೇವಾಲಯಗಳಿಗೂ ಭೇಟಿ ನೀಡಿ ನಾಳೆ ಹುಣಸೂರಿಗೆ ವಾಪಸ್ ಆಗುತ್ತೇನೆ ಎಂದು ತಿಳಿಸಿದ್ದಾರೆ. ಇನ್ನು ಅದೃಷ್ಟದ ಜೊತೆಗೆ ಆಶ್ಚರ್ಯಕರ ಫಲಿತಾಂಶದ ನಿರೀಕ್ಷೆಯಲ್ಲಿರುವ ಜೆಡಿಎಸ್ ಅಭ್ಯರ್ಥಿ ಡಿ.ಸೋಮಶೇಖರ್ ತಮ್ಮ ಮನೆಯಲ್ಲಿಯೇ ದೇವರಿಗೆ ಪೂಜೆ ಸಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದಾರೆ.