ಮೈಸೂರು: ಶಾಸಕ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಆರೋಪಿ ಹಲವು ಆಘಾತಕಾರಿ ಅಂಶಗಳನ್ನ ವಿಚಾರಣೆ ವೇಳೆ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ.
ಕಳೆದ ಭಾನುವಾರ ನಗರದ ಬನ್ನಿಮಂಟಪದ ಬಳಿ ಸ್ನೇಹಿತರ ಮಗನ ಮದುವೆ ಆರತಕ್ಷತೆ ವೇಳೆ ಸಂಗೀತ ಕಾರ್ಯಕ್ರಮವನ್ನು ವೀಕ್ಷಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾತ್ರಿ ಸುಮಾರು 11:30ರಲ್ಲಿ ತನ್ವೀರ್ ಸೇಠ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ವ್ಯಕ್ತಿಯನ್ನ ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ್ದರು.
ಯಾರು ಈ ಫರಾನ್ ಪಾಷ ? : ಶಾಸಕರ ಮೇಲೆ ಹಲ್ಲೆ ಮಾಡಿದ ಈ ಫರಾನ್ ಪಾಷ ಗೌಸಿಯಾ ನಗರದ ನಿವಾಸಿ. ಈತ ಮರಗೆಲಸ, ಅಕ್ರಮ ಆಯುಧಗಳ ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ. ಪಿಎಫ್ಐ ಹಾಗೂ ಎಸ್ಡಿಪಿಐ ಕಾರ್ಯಕ್ರಮಗಳಲ್ಲಿ ಸಕ್ರಿಯನಾಗಿದ್ದನಂತೆ. ರಾಜಕೀಯ ಅಸ್ತಿತ್ವ, ಸೈದ್ಧಾಂತಿಕ ಭಿನ್ನಾಭಿಪ್ರಾಯ ಹಾಗೂ ಹಿಂದೂ ಪರ ಸಂಘಟನೆಯ ಮುಖಂಡರ ಹತ್ಯೆ ಮಾಡಲು ತರಬೇತಿ ಪಡೆದಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ 2 ಬಾರಿ ಎನ್ ಆರ್ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಹತ್ಯೆಗೆ ವಿಫಲ ಯತ್ನ ಮಾಡಿದ್ದ ಎಂದು ಪೊಲೀಸ್ ತನಿಖೆಯಲ್ಲಿ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ. ಈತನಿಗೆ ಪಿಎಫ್ಐ ತರಬೇತಿ ನೀಡಿತ್ತು ಎನ್ನಲಾಗಿದೆ.
ಫೋನ್ ಕಾಲ್ ನೀಡಿದ ಮಹತ್ವದ ಸುಳಿವು : ಫರಾನ್ ಪಾಷ ಹತ್ಯೆಗೆ ಯತ್ನಿಸಿದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಿಕ್ಕಿಬಿದ್ದಿದ್ದ. ಆರತಕ್ಷತೆ ನಡೆಯುತ್ತಿದ್ದ ಬನ್ನಿಮಟಂಪ ಮೈದಾನದ ಹೊರಗೆ ಕಪ್ಪು ಬಣ್ಣದ ಕ್ವಾಲೀಸ್ ವಾಹನದಲ್ಲಿ ಇದ್ದ 4 ಜನ ಪರಾರಿಯಾಗಿದ್ದರು. ಬಂಧಿತ ಆರೋಪಿಯನ್ನು ವಿಚಾರಣೆ ನಡೆಸಿದ ಪೊಲೀಸರಿಗೆ ಆತ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಆತನ ಫೋನ್ ಕಾಲ್ಗಳ ಆಧಾರದ ಮೇಲೆ ಹಲವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಘಟನೆಯಲ್ಲಿ ಭಾಗಿಯಾಗಿದ್ದ ಅಕ್ರಮ್, ಅಭಿದ್ ಪಾಷ, ನೂರ್ ಜಾನ್, ಮೊಜಿದ್ ಹಾಗೂ ಮುಜಾ಼ಮಿಲ್ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಮುಖ ಆರೋಪಿ ಫರಾನ್ ಪಾಷನನ್ನು 12 ದಿನ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮಾಸ್ಟರ್ ಮೈಂಡ್ ಅಭಿದ್ ಪಾಷ : ಕ್ಯಾತಮಾರನಹಳ್ಳಿ ರಾಜು ಹತ್ಯೆ ಕೇಸ್ನಲ್ಲಿ ಭಾಗಿಯಾಗಿದ್ದ ಅಭಿದ್ ಪಾಷ ಪಿಎಫ್ಐ ಸಂಘಟನೆಯ ಸ್ಥಳೀಯ ಮಟ್ಟದ ನಾಯಕನಾಗಿದ್ದು, ಈತ ರಾಜು ಹತ್ಯೆ ಕೇಸ್ನಲ್ಲಿ ಜೈಲಿನಿಂದ ಬೇಲ್ ಮೇಲೆ ಹೊರ ಬಂದವನು. ಸ್ಥಳೀಯ ಎನ್ಆರ್ ಮೊಹಲ್ಲಾದ ನಿರುದ್ಯೋಗಿ ಯುವಕರಿಗೆ ಗುಪ್ತವಾಗಿ ತರಬೇತಿ ನೀಡಿ ಹಣಕಾಸಿನ ನೆರವು ನೀಡಿ ಅವರನ್ನು ಈ ರೀತಿಯ ಕೃತ್ಯಗಳಿಗೆ ಬಳಸುತ್ತಿದ್ದ ಎನ್ನಲಾಗಿದೆ. ಅದೇ ರೀತಿ ತನ್ವೀರ್ ಸೇಠ್ ಹತ್ಯೆಗೆ ವಿಫಲ ಯತ್ನ ನಡೆಸಿದ ಆರೋಪಿಗಳಿಗೂ ಈತ ಮಾಸ್ಟರ್ ಮೈಂಡ್ ಎಂದು ತನಿಖೆ ವೇಳೆಯಲ್ಲಿ ಫರಾನ್ ಪಾಷ ಹೇಳಿಕೆ ಕೊಟ್ಟಿದ್ದಾನೆ ಎನ್ನಲಾಗಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ನಾನಾ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದು, ಒಂದೆರಡು ದಿನಗಳಲ್ಲಿ ತನಿಖೆ ಮುಕ್ತಾಯಗೊಳಿಸುತ್ತೇವೆ ಎಂದು ಡಿಸಿಪಿ ಮುತ್ತುರಾಜ್ ಹೇಳಿದ್ದಾರೆ.