ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕರ ನಂತರ, ತಿ.ನರಸೀಪುರ ತಾಲೂಕಿನ ಸದಸ್ಯರು ತಿರುಗಿ ಬಿದ್ದಿದ್ದಾರೆ. ಅಲ್ಲದೇ 'ಡಿಸಿ ಏನು ಸುಪ್ರೀಂ ನಾ?' ಎಂದು ಪ್ರಶ್ನಿಸಿದ್ದಾರೆ.
ತಿ.ನರಸೀಪುರ ತಾಲೂಕಿನ ಕಚೇರಿಯ ಸಭಾಂಗಣದಲ್ಲಿ ತಾಪಂ ಅಧ್ಯಕ್ಷ ಹ್ಯಾಕನೂರು ಉಮೇಶ್ ನೇತೃತ್ವದಲ್ಲಿ ನಡೆಯುತ್ತಿರುವ ಸಾಮಾನ್ಯ ಸಭೆಯಲ್ಲಿ ತಲಕಾಡು ಪಂಚಲಿಂಗದರ್ಶನ ಮಹೋತ್ಸವ ಆಚರಣೆ ಚರ್ಚೆಗೆ ಗ್ರಾಸವಾಗಿದೆ. ಪಂಚಲಿಂಗದರ್ಶನ ಮಹೋತ್ಸವ ಆಚರಣೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯರನ್ನು ಕಡೆಗಣಿಸಲಾಗಿದೆ. ಸಚಿವರು ಮತ್ತು ಜಿಲ್ಲಾಧಿಕಾರಿಗಳಿಗೆ ಮಾತ್ರಾನಾ ಶಿಷ್ಟಾಚಾರ ನಿಯಮ? ಇರೋದು, ತಾಲೂಕು ಪಂಚಾಯಿತಿ ಸದಸ್ಯರು ಚುನಾಯಿತ ಜನಪ್ರತಿನಿಧಿಗಳಲ್ಲವೇ? ನಮ್ಮ ತಾಲೂಕಿನಲ್ಲಿ ನಡೆಯುವಂತಹ ಕಾರ್ಯಕ್ರಮದಲ್ಲಿ ನಾವು ಭಾಗವಹಿಸುವುದೇ ಬೇಡವೇ? ಎಂದು ಪ್ರಶ್ನಿಸಿದ್ದಾರೆ. ಈ ಸಂಬಂಧ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತಾಪಂ ಸದಸ್ಯರ ಅಸಮಾಧಾನ ಹೊಗೆಯಾಡಿದೆ.
ಜಿಲ್ಲಾಧಿಕಾರಿಗಳಿಗೆ ಜನಪ್ರತಿನಿಧಿಗಳ ಬಗ್ಗೆ ಗೌರವವೇ ಇಲ್ಲ. ಜಿಲ್ಲಾಧಿಕಾರಿಗಳೇ ಸುಪ್ರೀಂ ಆ? ಜಿಲ್ಲಾದ್ಯಂತ ನಡೆದಿರುವ ಕಾರ್ಯಕ್ರಮಗಳಲ್ಲಿ ಜಿಲ್ಲಾಧಿಕಾರಿಗಳು ಜನಪ್ರತಿನಿಧಿಗಳನ್ನ ಕಡೆಗಣಿಸಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತಾ.ಪಂ ಸದಸ್ಯರು ಕಿಡಿಕಾರಿದರು.
ತಾಲೂಕು ದಂಡಾಧಿಕಾರಿ ಮತ್ತು ಜಿಲ್ಲಾಧಿಕಾರಿ ವಿರುದ್ಧ ನಿರ್ಣಯ ಮಾಡುವಂತೆ ತಾ.ಪಂ ಸದಸ್ಯರು ನಿರ್ಧಾರ ಮಾಡಿದರು. ಮಾಜಿ ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕುಕ್ಕೂರು ಗಣೇಶ್ ಗಂಭೀರ ಆರೋಪ ಮಾಡಿದರು.