ಮೈಸೂರು: ಸುತ್ತೂರು ಮಠದ ಜಾತ್ರೆ ಹಿನ್ನೆಲೆಯಲ್ಲಿ ಆರು ದಿನಗಳ ಕಾಲ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸನ ನಡೆಯುತ್ತೆ. ಈ ಆರು ದಿನ ಇಲ್ಲಿ ಹೊತ್ತಿಸಿದ ಒಲೆ ಆರದಂತೆ ಭಕ್ತರಿಗೆ ಭೋಜನ ತಯಾರಾಗುತ್ತದೆ.
ಸುತ್ತೂರು ಜಾತ್ರೆಗೆ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವ ಹಿನ್ನೆಲೆಯಲ್ಲಿ ಭಕ್ತರಿಗೆ ಅನ್ನ ದಾಸೋಹಕ್ಕೆ ಈಗಾಗಲೇ ಚಾಲನೆ ಸಿಕ್ಕಿದೆ. ಜಾತ್ರೆಯ 5 ಕಡೆ ಭೋಜನಾ ಗೃಹಗಳನ್ನು ತೆರೆಯಲಾಗಿದೆ.
ಅತಿಥಿ ಗಣ್ಯರಿಗೆ, ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಒಂದು ಬಾರಿಗೆ 2000 ಮಂದಿ ಪ್ರಸಾದ ಸ್ವೀಕರಿಸಬಹುದಾಗಿದೆ. ಅಡುಗೆ ಸಿದ್ಧಪಡಿಸುವುದಕ್ಕಾಗಿ ಗದ್ದಿಗೆ ಸಮೀಪ ದೊಡ್ಡ ಪಾಕಶಾಲೆ ನಿರ್ಮಿಸಲಾಗಿದೆ. 50 ದೊಡ್ಡ ಗಾತ್ರದ ಒಲೆಗಳು ಹಗಲಿರುಳು ಉರಿಯುತ್ತಿವೆ. ಈ ಕಾರ್ಯಕ್ಕೆ ಒಟ್ಟು 500 ಬಾಣಸಿಗರು, 500 ಜನರು ಊಟ ಬಡಿಸಲು ನಿಯೋಜಿಸಲಾಗಿದೆ.
ನಾನಾ ಬಗೆಯ ಪ್ರಸಾದ ವಿತರಣೆ:
ದಾಸೋಹದಲ್ಲಿ ಸಿಹಿಪೊಂಗಲ್, ಖಾರ ಪೊಂಗಲ್, ಕೇಸರಿಬಾತ್,ಖಾರಭಾತ್, ಬಿಸಿಬೇಳೆಬಾತ್, ಕಡ್ಲೆಹುಳಿ, ಪಾಯಸ, ಲಾಡು, ಬಾದುಷಾ,ಸಿಹಿ ಖಾರ ಬೂಂದಿ ಇನ್ನಿತರ ಪ್ರಸಾದವಿರುತ್ತದೆ. ನಿರಂತರವಾಗಿ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಪ್ರಸಾದ ವಿತರಿಸುವುದರಿಂದ ಬೆಂಕಿಯನ್ನು ನಂದಿಸುವುದಿಲ್ಲ. 24 ಗಂಟೆಗಳ ಕಾಲ ಸೌದೆ ಒಲೆ ಉರಿಯುತ್ತದೆ. ಇಂತಹ ದಾಸೋಹಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗುತ್ತಾರೆ.