ಮೈಸೂರು : ಯುವ ಬ್ರಿಗೇಡ್ ಕಾರ್ಯಕರ್ತ ಕೊಲೆ ಪ್ರಕರಣದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರಿಗೆ ಪ್ರಾಥಮಿಕ ಮಾಹಿತಿ ಇಲ್ಲ. ಇದರ ಬಗ್ಗೆ ಸುಳ್ಳನ್ನು ಹೇಳುತ್ತಿದ್ದಾರೆ ಎಂದು ಸಚಿವ ಮಹದೇವಪ್ಪ ಪುತ್ರ ಸುನೀಲ್ ಹೇಳಿದ್ದಾರೆ. ಹತ್ಯೆಗೀಡಾದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸುನೀಲ್ ಬೋಸ್, ಚಕ್ರವರ್ತಿ ಸೂಲಿಬೆಲೆಗೆ ಈ ಕೊಲೆ ವಿಚಾರದಲ್ಲಿ ಪ್ರಾಥಮಿಕ ಮಾಹಿತಿಯೇ ಇಲ್ಲ. ಕೊಲೆಯಾಗಿರುವ ವ್ಯಕ್ತಿ ನಾಯಕ ಸಮುದಾಯಕ್ಕೆ ಸೇರಿದವರಾಗಿದ್ದು, ಅವರನ್ನು ದಲಿತ ವ್ಯಕ್ತಿಯೆಂದು ಸುಳ್ಳು ಹೇಳುತ್ತಿದ್ದಾರೆ. ಅವರು ಸುಳ್ಳಿನಿಂದಲೇ ಜೀವನ ಕಟ್ಟಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದರು.
ಸಾವಿನಲ್ಲೂ ರಾಜಕೀಯ ಮಾಡಬಾರದು : ವೈಯಕ್ತಿಕ ವಿಚಾರಕ್ಕೆ ಮಾಡುವ ಕೊಲೆಗೆ ಒಬ್ಬ ವ್ಯಕ್ತಿ ಅಥವಾ ಪಕ್ಷ ಹೇಗೆ ಹೊಣೆಗಾರರಾಗುತ್ತಾರೆ. ವೈಯಕ್ತಿಕ ಗಲಭೆಗಳು, ಕೃತ್ಯಗಳಿಗೆ ನಾವು ಹೊಣೆಗಾರರಾಗಲು ಸಾಧ್ಯವಿಲ್ಲ. ಬಿಜೆಪಿ ಕಾರ್ಯಕರ್ತನೊಬ್ಬ ಈ ರೀತಿ ಘಟನೆಯಲ್ಲಿ ಭಾಗಿಯಾದರೇ ಅದರ ಹೊಣೆಯನ್ನು ಬಿಜೆಪಿ ಹೊರುತ್ತದಯೇ? ಇಂತಹ ಸಾವಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದರು.
ಇದಕ್ಕೂ ಮೊದಲು ಮೃತ ವೇಣುಗೋಪಾಲ್ ಪತ್ನಿ ಸುನೀಲ್ ಬೊಸ್ ಮುಂದೆ ತಮ್ಮ ನೋವು ವ್ಯಕ್ತಪಡಿಸಿದರು. ನಾವಿಬ್ಬರು ಪ್ರೀತಿಸಿ ಮದುವೆ ಆಗಿದ್ದು, 7 ವರ್ಷ ಜೀವನ ಸಾಗಿಸಿದ್ದೇನೆ. ಒಂದು ಹೆಣ್ಣು ಮಗು ಕೂಡಾ ಇದೆ. ಇದೀಗ ನನಗೆ ಮುಂದೆ ಯಾರು ಗತಿ. ಈ ಪ್ರಕರಣ ಸಂಬಂದ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು. ಮೂರೇ ತಿಂಗಳಿಗೆ ಆರೋಪಿಗಳು ಹೊರಗೆ ಬಂದರೇ ನಾನು ಮತ್ತು ಮಗಳು ಸಾಯಬೇಕಾಗುತ್ತದೆ ಎಂದು ತಮ್ಮ ಆಕ್ರೋಶ ಹೊರಹಾಕಿದರು.
ಜೈನಮುನಿ ಹತ್ಯೆ ಆಘಾತವನ್ನುಂಟು ಮಾಡಿದೆ; ಸುತ್ತೂರು ಶ್ರೀ : ಬೆಳಗಾವಿ ಜಿಲ್ಲೆಯ ಹಿರೇಕೋಡಿಯ ನಂದಿಪರ್ವತ ಆಶ್ರಮದ ಜೈನಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆಯ ಸುದ್ದಿ ಆಘಾತವನ್ನುಂಟು ಮಾಡಿದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ. 25 ವರ್ಷಗಳ ಸನ್ಯಾಸ ಜೀವನ ನಡೆಸಿದ ಶ್ರೀಗಳಿಗೆ ಇಂಥ ದಾರುಣ ಅಂತ್ಯ ಆಗಿದ್ದು ದುರಾದೃಷ್ಟಕರ. ಅಹಿಂಸಾ ವ್ರತವನ್ನು ಬೋಧಿಸುವ, ಪಾಲಿಸುವ ಇಂಥ ಸನ್ಯಾಸಿಗಳನ್ನೇ ಕೊಲೆ ಮಾಡುವಂತಹ ಮನಃಸ್ಥಿತಿ ದುಃಖಕರವಾದದ್ದು ಎಂದು ಕಳವಳ ವ್ಯಕ್ತಪಡಿಸಿದರು.
ಸರಕಾರವು ಕೂಲಂಕಷ ತನಿಖೆ ನಡೆಸಿ ಈ ದೌರ್ಜನ್ಯ ಎಸಗಿರುವವರ ಮೇಲೆ ಶಿಸ್ತಿನ ಕ್ರಮ ಕೈಗೊಂಡು ಮುಂದೆ ಇಂಥ ಕೃತ್ಯಗಳಿಗೆ ಅವಕಾಶವಾಗದಂತೆ ಗಮನಹರಿಸಿಬೇಕು. ಅಗತ್ಯವಿರುವ ಕಡೆಗಳಿಗೆ ಸೂಕ್ತ ಬಂದೋಬಸ್ತ್ ನೀಡಿ ರಾಜ್ಯದಲ್ಲಿ ಶಾಂತಿಯಿಂದ ಬದುಕುವುದಕ್ಕೆ ಸೂಕ್ತ ವಾತಾವರಣ ನಿರ್ಮಿಸಬೇಕಾದದ್ದು ಅಗತ್ಯವಾಗಿದೆ. ದಿವಂಗತರ ಆತ್ಮಕ್ಕೆ ಶಾಂತಿ ಹಾಗೂ ರಾಜ್ಯದ ಎಲ್ಲ ಜೈನ ಬಂಧುಗಳಿಗೆ-ವಿಶೇಷವಾಗಿ ಅವರ ಭಕ್ತ ಸಮುದಾಯಕ್ಕೆ ಆಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲೆಂದು ಹಾರೈಸುತ್ತಾನೆ. ಆ ದುಃಖದ ಸಮಯದಲ್ಲಿ ಜೈನ ಬಂಧುಗಳೊಂದಿಗಿದ್ದೇವೆಂದು ತಿಳಿಯ ಬಯಸುತ್ತೇನೆ ಎಂದು ಶ್ರೀಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ : Mysore crime: ಯುವ ಬ್ರಿಗೇಡ್ ಸದಸ್ಯನ ಕೊಲೆ ಪ್ರಕರಣ.. ಎಸ್ಪಿ ಹೇಳಿದ್ದೇನು?