ಮೈಸೂರು: ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಕಲ್ಲು ತೂರಾಟ ನಡೆದ ಘಟನೆ ಸಾಲಿಗ್ರಾಮ ಪಟ್ಟಣದಲ್ಲಿ ನಡೆದಿದೆ.
ಸಾಲಿಗ್ರಾಮ ಪಟ್ಟಣದ ನಿವಾಸಿ ಶ್ರೀನಿವಾಸ್ ತಮ್ಮ ಬೈಕ್ನಲ್ಲಿ ಅವರ ಅತ್ತೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಎದುರುಗಡೆಯಿಂದ ಬೈಕ್ನಲ್ಲಿ ಬಂದ ಚಂದ್ರು ಎಂಬ ವ್ಯಕ್ತಿ ಶ್ರೀನಿವಾಸ್ ಬೈಕ್ಗೆ ಡಿಕ್ಕಿ ಹೊಡೆಯುವ ರೀತಿಯಲ್ಲಿ ಬಂದ ಕಾರಣ ಅವರಿಬ್ಬರಿಗೂ ರಸ್ತೆ ಮಧ್ಯದಲ್ಲೇ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಸಿಟ್ಟಿಗೆದ್ದ ಚಂದ್ರು ಕಬ್ಬಿಣದ ರಾಡ್ನಿಂದ ಶ್ರೀನಿವಾಸ್ ತಲೆಗೆ ಹೊಡೆದಿದ್ದು, ಸ್ಥಳದಲ್ಲೇ ಕುಸಿದ ಶ್ರೀನಿವಾಸ್ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು.
ಈ ವಿಚಾರ ತಿಳಿದ ಶ್ರೀನಿವಾಸ್ ಸಂಬಂಧಿಕರು ನಿನ್ನೆ ಮಧ್ಯಾಹ್ನ ಸಾಲಿಗ್ರಾಮ ಠಾಣೆಗೆ ದೂರು ನೀಡಲು ಬಂದಾಗ ಠಾಣೆಯಲ್ಲಿ ಪ್ರಭಾರಿ ಸಬ್ ಇನ್ಸ್ಪೆಕ್ಟರ್ ಇಲ್ಲದ ಕಾರಣ ದೂರು ಸ್ವೀಕರಿಸಲು ನಿರಾಕರಿಸಿದ್ದು, ಇದರಿಂದ ಪೊಲೀಸ್ ಠಾಣೆಯ ಮುಂದೆ ಶ್ರೀನಿವಾಸ್ ಕುಟುಂಬದವರು ಧರಣಿ ನಡೆಸಿದರು. ನಂತರ ನಗರದ ಅಂಬೇಡ್ಕರ್ ಬೀದಿಯಲ್ಲಿ ಪ್ರತಿಭಟನೆ ನಡೆಸಲು ಹೋಗುತ್ತಿರುವಾಗ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಬಂದು ಎರಡು ಗುಂಪುಗಳನ್ನು ಸಮಾಧಾನ ಪಡಿಸಿದರು.
ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಿಷ್ಯಂತ್ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದು, ಈ ಸಂಬಂಧ ಶಾಸಕ ಸಾ.ರಾ.ಮಹೇಶ್ ಸಹೋದರ ಸಾ.ರಾ.ರವೀಶ್ ಸೇರಿದಂತೆ 17 ಜನರ ಮೇಲೆ 1 ಗುಂಪು ದೂರು ನೀಡಿದ್ದರೆ, ಶ್ರೀನಿವಾಸ್ ಮೇಲೆ ಹಲ್ಲೆ ಮಾಡಿದ ಚಂದ್ರು ಗುಂಪು ಮತ್ತೊಂದು ದೂರು ದಾಖಲು ಮಾಡಿದೆ. ಸಾಲಿಗ್ರಾಮ ಪಟ್ಟಣದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಹೆಚ್ಚಿನ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.