ಮೈಸೂರು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ನಂಜನಗೂಡು ತಾಲೂಕಿನ ಶ್ರೀಕಂಠೇಶ್ವರಸ್ವಾಮಿ ದೊಡ್ಡಜಾತ್ರೆಯು ಏ.4 ರಂದು ನಡೆಯಲಿದ್ದು, ಈ ಸಂಬಂಧ ಎಲ್ಲಾ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದರು.
ಜಿಲ್ಲಾಧಿಕಾರಿ ಹಾಗೂ ನಂಜನಗೂಡಿನ ಶಾಸಕರಾದ ಹರ್ಷವರ್ಧನ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಶ್ರೀಕಂಠೇಶ್ವರಸ್ವಾಮಿ ದೊಡ್ಡಜಾತ್ರೆ ಆಚರಿಸಲಾಗುತ್ತಿದ್ದು, ಜಾತ್ರೆಯಲ್ಲಿ ಮೊದಲು ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಿಗದಿತ ಸ್ಥಳಗಳಲ್ಲಿ ಕಸದ ಬುಟ್ಟಿ ಇರಿಸಿ ಹೆಚ್ಚಿನ ಕೆಲಸದವರು ಕಾರ್ಯ ನಿರ್ವಹಿಸುವಂತೆ, ರಥ ಹೊರಡುವ ರಸ್ತೆಯ ಕಾಮಗಾರಿ ಪ್ರಾರಂಭವಾಗಿರುವುದರಿಂದ ಸೂಕ್ತವಾದ ವ್ಯವಸ್ಥೆ ಮಾಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುಡಿಯುವ ನೀರಿನ ವ್ಯವಸ್ಥೆಯನ್ನು ಸೂಕ್ತ ಸ್ಥಳಗಳಲ್ಲಿ ಅಳವಡಿಸಿ ಬಟ್ಟೆಯನ್ನು ಬದಲಾಯಿಸಿಕೊಳ್ಳಲು ಶೆಡ್‍ಗಳನ್ನು ನಿರ್ಮಾಣ ಮಾಡಬೇಕು. ದೇಗುಲದ ಸುತ್ತ ಆಕರ್ಷಕವಾದ ವಿದ್ಯುತ್ ದೀಪಗಳ ವ್ಯವಸ್ಥೆ, ರಥೋತ್ಸವದ ದಿನ ಸೂಕ್ತ ಬಂದೋಬಸ್ತ್ ಮಾಡಿ ವಾಹನ ನಿಲುಗಡೆಗೆ ಮಾರ್ಗಸೂಚಿಯನ್ನು ಅಳವಡಿಸಬೇಕು. ಹಾಗೆಯೇ ಸಿಸಿಟಿವಿ ಅಳವಡಿಕೆಗೆ ಆರಕ್ಷಕ ಇಲಾಖೆಗೆ ಸೂಚಿಸಿದರು.
ರಥೋತ್ಸವ ಮತ್ತು ತೆಪ್ಪೋತ್ಸವ ದಿನದಂದು ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತೆ ಕ್ರಮವಾಗಿ ತಾತ್ಕಾಲಿಕ ಆರೋಗ್ಯ ಕೆಂದ್ರ ತೆರೆಯಬೇಕು. ಆಂಬ್ಯುಲೆನ್ಸ್ ವಾಹನದೊಂದಿಗೆ ವೈದ್ಯಕೀಯ ಸಿಬ್ಬಂದಿ ಇರುವಂತೆ ಆರೋಗ್ಯ ಇಲಾಖೆಗೆ ತಿಳಿಸಿದರು.