ಮೈಸೂರು: ಸಿದ್ದರಾಮಯ್ಯನವರ ವಿರುದ್ಧ ಇತ್ತೀಚೆಗೆ ಯಡಿಯೂರಪ್ಪನವರು ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ. ಅವರು ಇದೇ ರೀತಿ ಮುಂದುವರೆಸಿದರೆ ಚೆನ್ನಾಗಿರಲ್ಲ ಎಂದು ಕಾಗಿನೆಲೆಯ ಕನಕ ಗುರುಪೀಠದ ಶ್ರೀನಿರಂಜನಾಂದಪುರಿ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಸಿದ್ದಾರ್ಥ ನಗರದಲ್ಲಿರುವ ಕನಕ ಸಮುದಾಯ ಭವನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ಕೋಮಿನ ಸಮುದಾಯದ ವ್ಯವಸ್ಥಿತ ಪಿತೂರಿಯಿಂದಾಗಿ ಸಿದ್ದರಾಮಯ್ಯನವರಿಗೆ ಸೋಲಾಯಿತು. ನೀರು ಕೇಳಿ ಬಂದವರಿಗೆ ಹಾಲುಣಿಸುವ ಹಾಲುಮತದ ಪರಂಪರೆಯಲ್ಲಿ ಸಿದ್ದರಾಮಯ್ಯ ಬಂದಿದ್ದಾರೆ ಎಂದರು.
ಸಿದ್ದರಾಮಯ್ಯ ಮನಸ್ಸು ಮಾಡಿದ್ರೆ ಏನ್ ಬೇಕಾದರೂ ಮಾಡಬಹುದು. ಅವರ ಚಾಮುಂಡೇಶ್ವರಿ ಸೋಲಿನಿಂದ ನಿಜಕ್ಕೂ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ. ಅವರ ಬಗ್ಗೆ ಯಾರಾದ್ರೂ ಸಣ್ಣದಾಗಿ ಮಾತಾನಾಡಿದರೆ ನಾವು ಸಹಿಸುವುದಿಲ್ಲ. ರಾಜಕೀಯ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಸಾಕಷ್ಟು ನಡೆಯುತ್ತವೆ. ಆಗಲಾದರೂ ಸರಿಯಾದ ನಿರ್ಣಯವನ್ನು ಕೈಗೊಳ್ಳಿರಿ. ಮರಿ ರಾಜಕೀಯ ವ್ಯಕ್ತಿಗಳು ಎಷ್ಟು ಮಂದಿ ಹುಟ್ಟಿಕೊಂಡರೂ ಸಿದ್ದರಾಮಯ್ಯ ಅವರಂತಹ ಮತ್ತೊಬ್ಬರು ನಾಯಕರಾಗಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಬರುವ ಅವಕಾಶದಲ್ಲಿ ಒಳ್ಳೆ ನಿರ್ಣಯ ಮಾಡಿ ಎಂದು ಸಲಹೆ ನೀಡಿದರು.
ಹೈಕಮಾಂಡ್ ಬುಲಾವ್:
ಶನಿವಾರ ದೆಹಲಿಗೆ ತೆರಳುವುದಾಗಿ ಹೇಳಿದ ಸಿದ್ದರಾಮಯ್ಯ, ನಾನು ಇಂದು ಮೈಸೂರಿಗೆ ತರಾತುರಿಯಲ್ಲಿ ಬಂದಿದ್ದೇನೆ. ಇವತ್ತೇ ಬೆಂಗಳೂರಿಗೆ ವಾಪಸ್ಸು ಹೋಗಬೇಕು. ಆದ್ದರಿಂದ ತರಾತುರಿಯಲ್ಲಿ ಫ್ಲೈಟ್ ಮಾಡಿಕೊಂಡು ಬಂದಿದ್ದೇನೆ. ಬೆಳಿಗ್ಗೆ ದೆಹಲಿಗೆ ಹೋಗಬೇಕು. ರಾಜ್ಯ ರಾಜಕಾರಣದಲ್ಲಿ ಏನಾಗುತ್ತಿದೆ ಎಂಬುದು ನಿಮಗೆಲ್ಲ ಗೊತ್ತೇ ಇದೆ ಎಂದರು.