ಮೈಸೂರು: ಚಂದ್ರಗ್ರಹಣದ ಸಂದರ್ಭದಲ್ಲಿ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಹಾಗೂ ಮಂತ್ರ ಪಠಣ ನಡೆಯಲಿದೆ. ಆದರೆ, ಭಕ್ತರಿಗೆ ದೇವಿಯ ದರ್ಶನ ಭಾಗ್ಯ ಇರೋದಿಲ್ಲ.
ಗುರು ಪೂರ್ಣಿಮೆಯ ದಿನ ನಡೆಯುತ್ತಿರುವ ಚಂದ್ರಗ್ರಹಣ ಪ್ರಯುಕ್ತ ಸಾಮಾನ್ಯವಾಗಿ ದೇವಾಲಯಗಳು ಮುಚ್ಚಿರುತ್ತದೆ. ಆದರೆ, ಮೈಸೂರಿನ ಪ್ರಸಿದ್ಧ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ತಾಯಿಗೆ ಗ್ರಹಣ ಸಂದರ್ಭದಲ್ಲಿ ವಿಶೇಷ ಪೂಜೆ ಹಾಗೂ ಮಂತ್ರ ಪಠಣ ನಡೆಯಲಿದ್ದು, ಸಾರ್ವಜನಿಕರಿಗೆ ದರ್ಶನ ಭಾಗ್ಯ ಇರುವುದಿಲ್ಲ.
ಇಂದು ಗುರು ಪೂರ್ಣಿಮೆಯ ಹಿನ್ನಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ನಡೆಯಲಿದ್ದು, ಮಧ್ಯಾಹ್ನ 3 ಗಂಟೆಯ ಬಳಿಕ ದಾಸೋಹ ಇರುವುದಿಲ್ಲ. ರಾತ್ರಿ 9ಗಂಟೆಗೆ ದೇವಿಗೆ ಮಹಾಮಂಗಳಾರತಿ ಮಾಡಿ ದೇವಾಲಯದ ಬಾಗಿಲು ಮುಚ್ಚಲಾಗುವುದು. ಬುಧವಾರ ನಸುಕಿನ 3 ಗಂಟೆಯಿಂದ 4:45ರ ಗ್ರಹಣ ಸ್ಪರ್ಶದ ಸಮಯದಲ್ಲಿ ದೇವಾಲಯದ ಬಾಗಿಲನ್ನು ತೆಗೆದು ಪೂಜೆ ಮತ್ತು ವೇದ ಘೋಷಗಳ ಪಠಣ ನಡೆದ ಬಳಿಕ ಬೆಳಗಿನ ಜಾವ ದೇವಾಲಯವನ್ನು ಶುಚಿಗೊಳಿಸಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಿ ಕೊಡಲಾಗುವುದು.
ಈ ಬಾರಿ ಚಂದ್ರ ಗ್ರಹಣದ ಸಂದರ್ಭದಲ್ಲೇ ಚಾಮುಂಡಿ ಬೆಟ್ಟದ ತಾಯಿಗೆ ಪೂಜೆ ಸಲ್ಲಿಸುತ್ತಿರುವುದು ಮತ್ತೊಂದು ವಿಶೇಷವಾಗಿದೆ ಎನ್ನುತ್ತಾರೆ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್. ಇದೇ ರೀತಿ ದಕ್ಷಿಣಕಾಶಿ ಖ್ಯಾತಿಯ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ಗ್ರಹಣದ ಸಂದರ್ಭದಲ್ಲಿ ಯಾವುದೇ ಪೂಜೆ ಪುರಸ್ಕಾರಗಳು ನಡೆಯುವುದಿಲ್ಲ. ಆದರೆ, ಗ್ರಹಣದ ನಂತರ ದೇವಾಲಯವನ್ನು ಶುಚಿಗೊಳಿಸಲಾಗುವುದುವೆಂದು ಇನ್ನೊಬ್ಬ ಅರ್ಚಕರಾದ ನಾಗಚಂದ್ರ ದೀಕ್ಷಿತ್ ತಿಳಿಸಿದ್ದಾರೆ.