ಮೈಸೂರು: ಈಶ್ವರಪ್ಪನಿಗೆ ಸಂಸ್ಕಾರ, ಸಂಸ್ಕೃತಿ ಗೊತ್ತಿಲ್ಲ. ಯಾರ ಬೇಕಾದರೂ ಆ ಪದವನ್ನು ಬಳಸಬಹುದು. ಆದರೆ ಸಂಸ್ಕಾರ ಇರುವವರು ಈ ರೀತಿಯ ಪದ ಬಳಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಗರಕ್ಕೆ ಇಂದು ಆಗಮಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ದ ಈಶ್ವರಪ್ಪ ಅವಾಚ್ಯ ಪದ ಬಳಸಿರುವ ವಿಚಾರ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದರು. ಈಶ್ವರಪ್ಪನ ಮಾತು, ಅವರು ಬೆಳೆದು ಬಂದ ಹಾದಿಯ ಬಗ್ಗೆ ತಿಳಿಸುತ್ತೆ. ಅವರಿಂದ ಬದಲಾವಣೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.
ಬಿಜೆಪಿ ಸಂಸ್ಕೃತಿಯೇ ಹಾಗೆ: ಈಶ್ವರಪ್ಪನವರಿಗೆ ಆರೋಗ್ಯಕರವಾದ ಸಂಸ್ಕೃತಿಯಿಲ್ಲ. ಬಿಜೆಪಿ ಸಂಸ್ಕೃತಿಯೇ ಅಂತಹದ್ದು. ಹಾಗಾಗಿ ಅವರಿಗೆ ಬುದ್ಧಿ ಹೇಳುವ ಕೆಲಸ ಮಾಡುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಹುಲಿ ಯಾರು..? ಇಲಿ ಯಾರು? ಜನರೇ ಹೇಳ್ತಾರೆ: ಸಿದ್ದರಾಮಯ್ಯ ಇಲಿ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಇಲ್ಲಿ ಹುಲಿ ಯಾರು, ಇಲಿ ಯಾರು, ಮನುಷ್ಯ ಯಾರು ಎಂಬುದನ್ನು ತೀರ್ಮಾನ ಮಾಡಬೇಕಾದವರು ಜನ. ಇದಕ್ಕೆ ಈಶ್ವರಪ್ಪನವರ ಸರ್ಟಿಫಿಕೇಟ್ ಬೇಕಿಲ್ಲ ಎಂದು ಕೆಸ್ಇ ವಿರುದ್ಧ ಗುಡುಗಿದರು.